Tuesday 31 May 2016

" ಶ್ರೀದೇವಿಮಹಾತ್ಮೆ "

ಬೆಳಿಗ್ಗೆ ಮನು ಎಡಪದವ್ ಇವರು ವೇದಿಕೆಯಲ್ಲಿ " ಶ್ರೀದೇವಿಮಹಾತ್ಮೆ " ಪ್ರಥಮವಾಗಿ ಎಲ್ಲಿ ಪ್ರದರ್ಶಿತವಾಗಿತ್ತು ಎಂಬ ಪ್ರಶ್ಣೆಯನ್ನು ಕೇಳಿದ್ದರು . ನನಗೆ ತಿಳಿದ ಮಾಹಿತಿಯನ್ನು ಸದಸ್ಯರಿಗಾಗಿ ಹಂಚುತ್ತಿದ್ದೇನೆ .
ಸುಮಾರು ೧೯೩೦ರಲ್ಲಿ , ಕಾಸರಗೋಡು ಸಮೀಪ
" ಕೊರಕ್ಕೋಡು " ಎಂಬಲ್ಲಿ ಕೊರಕ್ಕೋಡು ಎಂಬ ಮೇಳವಿತ್ತು. ಆ ಮೇಳದ ಯಜಮಾನರಾದ ಶ್ರೀ ದೇವಪ್ಪ ಮೇಸ್ತ್ರಿಯವರಿಗೆ ಏಳು ದಿನಗಳ ಕಾಲ " ಶ್ರೀದೇವಿಮಹಾತ್ಮೆ " ಆಟ ಆಡಿಸಬೇಕೆಂದು ಇಚ್ಛೆಯಾಯಿತು.
ಆದರೆ , " ಶ್ರೀದೇವಿಮಹಾತ್ಮೆ " ಪ್ರಸಂಗ ಪುಸ್ತಕ ಬರೆದಿರದ ಕಾಲವದು. ಆ ಕಾರಣಕ್ಕಾಗಿ ದೇವಪ್ಪ ಮೇಸ್ತ್ರಿಗಳು ಆ ಕಾಲದ ಸುಪ್ರಸಿಧ್ಧ ಭಾಗವತರೂ , ಆಶುಕವಿಗಳೂ ಆದ ಶ್ರೀ ಮಾಂಬಾಡಿ ನಾರಾಯಣ ಭಾಗವತರಲ್ಲಿ ಬಂದು
" ನೀವೇ ಈ ಪ್ರಸಂಗ ಮುನ್ನಡೆಸಿ ಕೊಡಬೇಕು " ಎಂದು ಕೇಳಿಕೊಂಡರು.
ಮಾಂಬಾಡಿಯವರೂ , ಶ್ರೀದೇವಿಯ ಸೇವೆ ಎಂದು ಒಪ್ಪಿದರು. ಆ ಕಾಲದಲ್ಲಿ ಭಾಗವತರಾಗಿ ಮೆರೆದಿದ್ದ ಶ್ರೀ ಜತ್ತಿ ಈಶ್ವರ ಭಾಗವತರಿಂದ ದೇವಿಮಹಾತ್ಮೆ
ಯ ಕಥೆ ಕೇಳಿದ ಮಾಂಬಾಡಿಯವರು ಸ್ವಂತ ಕಲ್ಪನೆ ಯಿಂದ ಪದಗಳನ್ನು ಬರೆದರು .
ಏಳು ದಿನಗಳ " ಶ್ರೀದೇವಿಮಹಾತ್ಮೆ " ಪ್ರಾರಂಭವಾಯಿತು. ಮೊದಲ ದಿನ ಮೇಳದ ಭಾಗವತರಾದ ಪೆರಿಯಪ್ಪಾಡಿ ಪರಮೇಶ್ವರ ಭಾಗವತರು ಹಾಡಿದರು. ನಂತರದ ದಿನಗಳಲ್ಲಿ ಮಾಂಬಾಡಿ ನಾರಾಯಣ ಭಾಗವತರೇ ಪ್ರಸಂಗವನ್ನು ಮುನ್ನಡೆಸಿದರು. ಏಳೂ ದಿನಗಳ ಕಾಲ ಮಾಂಬಾಡಿಯವರು ಪರಿಶುಧ್ಧ ವೃತ ನಿಯಮದಲ್ಲಿದ್ದರಲ್ಲದೇ , ಎಲ್ಲಾ ಕಲಾವಿದರೂ , ಅದೇ ಶುಧ್ಧ ನಿಯಮ ಪಾಲಿಸಬೇಕೆಂದು ಆಜ್ಞಾಪಿಸಿದ್ದರು .
ಹೀಗೆ , ಪ್ರಪ್ರಥಮವಾಗಿ
" ಶ್ರೀದೇವಿಮಹಾತ್ಮೆ " ಕೊರಕ್ಕೋಡಿನಲ್ಲಿ ಏಳು ದಿನಗಳ ಕಾಲ ದಿನಕ್ಕೊಂದು ಆಖ್ಯಾನದಂತೆ , ಪ್ರದರ್ಶನಗೊಂಡಿತು. ಜತ್ತಿ ಈಶ್ವರ ಭಾಗವತರು ಏಳೂ ದಿನವೂ ತಮ್ಮ ಧರ್ಮಪತ್ನಿಯೊಂದಿಗೆ ಎದುರಿನ ಆಸನದಲ್ಲಿ ಪ್ರೇಕ್ಷಕರಾಗಿ ಪ್ರದರ್ಶನ ನೋಡಿ ಪ್ರೋತ್ಸಾಹಿಸಿದ್ದರು .
ಅಂದು " ಶ್ರೀದೇವಿ " ಯ ಪಾತ್ರ ನಿರ್ವಹಿಸಿದವರು ಅಂದಿನ ಕಾಲದ ಸುಪ್ರಸಿಧ್ಧ ಕಲಾವಿದರಾಗಿದ್ದ
ಶ್ರೀ ಪಾಣಾಜೆ ಗಣಪತಿ ಭಟ್ಟರು
( ಯಕ್ಷರಂಗದ ಪ್ರಪ್ರಥಮ ಶ್ರೀದೇವಿ ಪಾತ್ರಧಾರಿ ) , ಮಹಿಷಾಸುರನಾಗಿ ಕಾಣಿಸಿಕೊಂಡವರು ಸುಪ್ರಸಿಧ್ಧ ಬಣ್ಣದ ವೇಷಧಾರಿಯಾಗಿದ್ದ " ಬಣ್ಣದ ಕುಂಞ "
ರವರು ( ಪ್ರಪ್ರಥಮ ಮಹಿಷ ಪಾತ್ರಧಾರಿ )
ಹೀಗೆ " ಪ್ರಪ್ರಥಮ ಶ್ರೀದೇವಿ ಮಹಾತ್ಮೆ " ಪ್ರಸಂಗ ಏಳುದಿನಗಳ ಕಾಲ ಕೊರಕ್ಕೋಡಿನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು .
ಕೊರಕ್ಕೋಡಿನಲ್ಲಿ ಯಶಸ್ವಿಯಾಗಿ ಜರಗಿದ " ಶ್ರೀ ದೇವಿ ಮಹಾತ್ಮೆ " ಯ ವಿಷಯ ಆಗಿನ ಶ್ರೀ ಕ್ಷೇತ್ರ ಕಟೀಲಿನ ಮೊಕ್ತೇಸರರಾದ ಶ್ರೀಧರ ಶೆಟ್ಟಿಯವರು ಅರಿತು, ಅವರೂ ಕಟೀಲು ಮೇಳದ ವತಿಯಿಂದ " ಶ್ರೀದೇವಿಮಹಾತ್ಮೆ " ಆಟ ಆಡಿಸಲು ನಿರ್ಧರಿಸಿದರು .ದಿ. ಕಲ್ಲಾಡಿ ಕೊರಗ ಶೆಟ್ಟರು ಶ್ರೀಕ್ಷೇತ್ರದ ಮೇಳದ ವ್ಯವಸ್ತಾಪಕತ್ವ ವಹಿಸಿದ್ದ ಕಾಲವದು .ಶ್ರೀಧರ ಶೆಟ್ಟರ ಮುತುವರ್ಜಿಯಲ್ಲಿ , ಅರ್ಚಕರಾದ ಅಸ್ರಣ್ಣ ಬಂಧುಗಳ ಪ್ರೋತ್ಸಾಹದೊಂದಿಗೆ ೧೯೪೧ ರಲ್ಲಿ , ಕಿನ್ನಿಗೋಳಿಯಲ್ಲಿ ೫ ದಿವಸಗಳ ಕಾಲ
" ಶ್ರೀದೇವಿಮಾತ್ಮೆ " ಆಡಿಸಿದರು .
ಆದರೆ , ಮೇಳದ ಭಾಗವತರು ಆಡಿಸಲು ಹಿಂಜರಿದಾಗ ಮಾಂಬಾಡಿ ನಾರಾಯಣ ಭಾಗವತರನ್ನೇ ಕರೆಸಿ ಆಟವನ್ನು ಪ್ರದರ್ಶಿಸಿದರು. ಮಾಂಬಾಡಿಯವರು " ಶ್ರೀಸಪ್ತಶತಿ ಗೃಂಥ " ವನ್ನು ಆಧರಿಸಿ " ಶ್ರೀದೇವಿ ಮಹಾತ್ಮೆ " ಆಟವನ್ನು ಆಡಿಸಿದ್ದರು . ಈಗಿನ " ಶ್ರೀದೇವಿಮಹಾತ್ಮೆ " ತ್ರಿಮೂರ್ತಿಗಳ ಹುಟ್ಟಿನೊಂದಿಗೆ ಕಥೆ ಪ್ರಾರಂಭವಾಗುವದು .( ಇದು ಬಲಿಪ ಭಾಗವತರ ಪ್ರಸಂಗ ) ಆದರೆ , ಅಂದು ಮಾಂಬಾಡಿಯವರ ಐದು ದಿನಗಳ ಶ್ರೀದೇವಿಮಹಾತ್ಮೆಯು ಸುರಥನ ಒಡ್ಡೋಲಗದಿಂದ ಪ್ರಾರಂಭವಾಗುತ್ತಿತ್ತು.
ಅಂದು " ಶ್ರೀದೇವಿ " ಯಾಗಿ ಮಿಂಚಿದವರು ಶ್ರೀ ಕಡಂದೇಲು ಪುರುಷೋತ್ತಮ ಭಟ್ಟರು . ನಂತರದ ದಿನಗಳಲ್ಲಿ ಕಡಂದೇಲುರವರೇ ಶ್ರೀದೇವಿಯಾಗಿ ವಿಜೃಂಭಿಸಿದ್ದುದು ಈಗ ಇತಿಹಾಸ.
ಅಂದು ಐದು ದಿನಗಳ
" ಶ್ರೀದೇವಿಮಹಾತ್ಮೆ " ಯ ಕೊನೆಯ ದಿನ " ಅರುಣಾಸುರ ವಧೆ " ಯನ್ನೂ ಸೇರಿಸಿದ್ದರು .
ಈ ಐದೂ ದಿನಗಳ ಕಾಲ ಮಾಂಬಾಡಿ ಭಾಗವತರು ಪರಿಶುಧ್ಧ ವೃತನಿಷ್ಟರಾಗಿ , ಒಪ್ಪೊತ್ತಿನ ಊಟ ಮಾತ್ರ ಮಾಡಿ ಹಗಲಿನಲ್ಲಿ ಕಟೀಲಿನ ಶ್ರೀದೇವಿಯ ಪರಮ ಪವಿತ್ರ ಸನ್ನಿಧಾನದಲ್ಲಿ ಏಕಾಂತವಾಗಿ ಧ್ಯಾನ ಮಾಡುತ್ತಿದ್ದರಂತೆ . ಕಡಂದೇಲು ಹಾಗೂ ಇತರ ಕಲಾವಿದರೂ , ವೃತಧಾರಿಗಳಾಗಿ ಪಾತ್ರ ನಿರ್ವಹಿಸಿದ್ದರು. ಈ ಐದು ದಿವಸಗಳ
" ಶ್ರೀದೇವಿಮಹಾತ್ಮೆ " ಯಜ್ಞಫಲವನ್ನು ಕೊಟ್ಟಿತ್ತು .ಅಂದು, ಕಿನ್ನಿಗೋಳಿಯಲ್ಲಿ ಚೌಕಿಯಾಗಿ
ಮೇಳದ " ಶ್ರೀದೇವರು " ವಿರಾಜಮಾನರಾದ ಅದೇ ಸ್ತಳ ಇಂದು
" ಶ್ರೀ ರಾಮಮಂದಿರ " ವಾಗಿ ಕಂಗೊಳಿಸುತ್ತಿರುವದು
" ಶ್ರೀದೇವಿಮಹಾತ್ಮೆ " ಪ್ರಸಂಗದ
" ಮಹಾತ್ಮೆ " ಯಿಂದಲೇ ಎಂದು ಭಕ್ತರ ಅಂಬೋಣ.
ಎಂ. ಶಾಂತರಾಮ ಕುಡ್ವ
ಮೂಡಬಿದಿರೆ .

No comments:

Post a Comment