Tuesday 31 May 2016

ಉದಯ ನಾವಡ

ಉದಯ ನಾವಡರು ಇತ್ತೀಚೆಗೆ ಕೂಡ್ಲು ಮೇಳದಲ್ಲಿ ಸುಮಾರು ೧೦ ವರ್ಷಗಳ ನಂತರ ಗೆಜ್ಜೆ ಕಟ್ಟಿಶ್ರೀಕೃಷ್ಣನಾಗಿ ಮೆರೆದರು ಎಂಬ ವಿಷಯ ಯಕ್ಷರಂಗದಲ್ಲಿ ಸಂಚಲನ ಮೂಡಿಸಿತು. ಸುದ್ದಿ ಖಂಡಿತವಾಗಿಯೂ ಸಂಚಲನ ಮೂಡಿಸುವಂಥಹದೇ. ಎರಡು ದಶಕಗಳ ಕಾಲ ಪುಂಡುವೇಷಧಾರಿಯಾಗಿ, ಸ್ತ್ರೀಪಾತ್ರಧಾರಿಯಾಗಿ, ಅಪರೂಪಕ್ಕೊಮ್ಮೆ ಹಾಸ್ಯ ಪಾತ್ರದಲ್ಲೂ ಮಿಂಚಿದ ಪ್ರತಿಭಾನ್ವಿತ ಕಲಾವಿದರಾದ ಉದಯ ನಾವಡರಂಥವರು ಏಕಾಏಕಿಯಾಗಿ ನೇಪಥ್ಯಕ್ಕೆ ಸರಿದರು ಎಂದರೆ ನಿಜವಾಗಿಯೂ ಯಕ್ಷರಂಗಕ್ಕೆ ಒಂದು ದೊಡ್ಡ ನಷ್ಟವೇ. ಹಾಗಾಗಿಯೇ, ಉದಯ ನಾವಡರ "ರಂಗದ ಮರುಪ್ರವೇಶ" ಒಂದು ದೊಡ್ಡ ಸುದ್ದಿಯಾದುದು .

೧೯೮೦ - ೨೦೦೦ರ ದಶಕದಲ್ಲಿ ಉದಯ ನಾವಡರು ತೆಂಕುತಿಟ್ಟಿನಲ್ಲಿ ಮೆರೆದ ವರ್ಷ. ಅರುವ, ಬಪ್ಪನಾಡು, ಬೆಳ್ಮಣ್ಣು, ಮದವೂರು, ಮಂಗಳಾದೇವಿ ಮುಂತಾದ ಮೇಳಗಳಲ್ಲಿ ಪುಂಡುವೇಷಧಾರಿಯಾಗಿ ಮಿಂಚಿದವರು ಉದಯ ನಾವಡರು. "ಯಕ್ಷರಂಗದ ರಾಜ" ಎಂದು ಹೆಸರು ಗಳಿಸಿದ ಆಜಾನುಬಾಹು ವ್ಯಕ್ತಿತ್ವದ ರಾಧಾಕೃಷ್ಣ ನಾವಡರ ಖಾಸಾ ತಮ್ಮನಾದ ಉದಯ ನಾವಡರು, ಅಣ್ಣನ ನೆರಳನ್ನೇ ಹಿಂಬಾಲಿಸಿದವರು. ಅಣ್ಣ ಹೋದ ಮೇಳವನ್ನೇ ಅಂಟಿಕೊಂಡು ಬೆಳೆದವರು. ಅಣ್ಣನ ಪಡಿಯಚ್ಚಿನಲ್ಲೇ ತಮ್ಮ ನೆಲೆ ಕಂಡವರು. ಯಕ್ಷರಂಗದಲ್ಲಿ ಅಪ್ರತಿಮ ಸಾಧನೆ ಮಾಡುತ್ತಾರೆ ಎಂದು ಯಕ್ಷಗಾನದ ಅಭಿಮಾನಿಗಳು ನಿರೀಕ್ಷಿಸಿದ ಸಮಯದಲ್ಲೇ, ಬೆನ್ನು ನೋವಿನಿಂದಾಗಿ ನೇಪಥ್ಯಕ್ಕೆ ಸರಿದರು ಎಂದಾಗ ಅತ್ಯಂತ ಬೇಸರ ಪಟ್ಟವರಲ್ಲಿ ನಾನೂ ಓರ್ವ. ಉತ್ತುಂಗ ಶಿಖರವನ್ನು ಏರುವಷ್ಟರಲ್ಲೇ ಬೆನ್ನು ನೋವಿನ ಕಾರಣದಿಂದ ಕುಸಿದನಲ್ಲಾ ಎಂಬ ವ್ಯಥೆ ನನ್ನನ್ನೂ ಕಾಡಿತ್ತು.

ಉದಯ ನಾವಡರನ್ನು ನಾನು ಚೆನ್ನಾಗಿ ಬಲ್ಲವ. ರಾಧಾಕೃಷ್ಣ ನಾವಡ, ಉದಯ ನಾವಡರು ನನ್ನ ಮೆಚ್ಚಿನ ಕಲಾವಿದರೂ ಹೌದು. ದಿ. ಶೇಖರ ಶೆಟ್ಟಿಯವರ ಬೆಳ್ಮಣ್ಣು ಮೇಳದ ತಿರುಗಾಟದಲ್ಲಿರುವಾಗ, ಶೇಖರ ಶೆಟ್ಟರು ನನ್ನ ಆತ್ಮೀಯರಾದ ಕಾರಣ, ನಾನು ಚೌಕಿಗೆ ಹೋದಾಗಲೆಲ್ಲಾ ನಾವಡ ಸಹೋದರರನ್ನು ಮಾತಾಡಿಸದೇ ಬಂದವನಲ್ಲ. ರಾಧಾಕೃಷ್ಣ ನಾವಡರು ಸ್ನೇಹಮಯಿಯಾಗಿದ್ದರೆ, ಅದೇ ಉದಯ ನಾವಡರು ಸ್ವಲ್ಪಮಟ್ಟಿಗೆ ಸಂಕೋಚ ಸ್ವಭಾವದವರು. ಸರಳ ವ್ಯಕ್ತಿತ್ವದ ಉದಯ ನಾವಡರು ಮಾತಾಡುವುದು ಕಡಿಮೆಯಾದರೂ, ರಂಗದಲ್ಲಿಯ ದುಡಿಮೆಯಿಂದ ಗಮನ ಸೆಳೆಯುತ್ತಿದ್ದರು.

ನನಗೆ ಚೆನ್ನಾಗಿ ನೆನಪಿದೆ. ವರ್ಷ ಬೆಳ್ಮಣ್ ಮೇಳದವರ ಪ್ರಾರಂಭದ ತಿರುಗಾಟ. ಪ್ರಸಂಗ "ಬಂಗಾರ್ದ ತೊಟ್ಟಿಲ್". ಅತ್ಯಂತ ಯಶಸ್ವಿಯಾದ ಪ್ರಸಂಗವದು. ಕೊಳ್ಯೂರು ರಾಮಚಂದ್ರ ರಾವ್, ಮೋಹನ ಬೈಪಡಿತ್ತಾಯ, ಸರಪಾಡಿ ಅಶೋಕ ಶೆಟ್ಟಿ, ರಾಧಾಕೃಷ್ಣ ನಾವಡ, ಸಿದ್ದಕಟ್ಟೆ ಕೊರಗದಾಸ್, ಮುಂಬೈ ರಘುನಾಥ ಶೆಟ್ಟಿ, ಮಾಡಾವ್ ಕೊರಗಪ್ಪ ರೈ ಮುಂತಾದ ಸುಪ್ರಸಿದ್ಧ ಕಲಾವಿದರಿಂದ ಕೂಡಿದ ಮೇಳ.
ಪ್ರಸಂಗದಲ್ಲಿ ಉದಯ ನಾವಡರ ಬಾಲ್ಯದ "ಕರ್ನಗೆ" ಎಂಬ ಸ್ರ್ರೀ ಪಾತ್ರ. ಉತ್ತರಾರ್ಧದ ಕರ್ನಗೆಯ ಪಾತ್ರ ಕೊಳ್ಯೂರರದ್ದು.

ಭಾಗವತರ "ಬತ್ತಲ್ ಕರ್ನಗೆಲಾ" ಪದ್ಯಕ್ಕೆ ಉದಯ ನಾವಡರ ಪ್ರವೇಶ. ಲಂಗ ದಾವಣಿ ತೊಟ್ಟು ಪ್ರವೇಶದ ನಾಟ್ಯಕ್ಕೆ ಕಾಲದಲ್ಲಿ ಸೋತವರೇ ಹೆಚ್ಚು. ಅಷ್ಟು ಆಕರ್ಷಣೀಯವಾದ, ರೂಪ ಹಾಗೂ ನಿರ್ವಹಣೆ ನಾವಡರದು.
ಒಂದು ದಿನ ಪ್ರಸಂಗ ನೋಡಲು ಬಂದಿದ್ದ, ನನ್ನ ಮುಂದಿನ ಆಸನದಲ್ಲಿ ಕುಳಿತಿದ್ದ ಮುಂಬೈ ನಿವಾಸಿಯಾದ ತುಳುವ ಹುಡುಗಿಯೊಬ್ಬಳು, ತನ್ನೊಂದಿಗಿದ್ದ ಹುಡುಗಿಯರೊಂದಿಗೆ
"
ಪೊಣ್ಣ್ ವಾ ಪೊರ್ಲುಲ್ಲಾಲ್. ಒಂಜಿ ಕಿಸ್ ಕೊರ್ಕಾ ಪಂಡ್ದ್ ತೋಜುಂಡು"
ಅಂದಿದ್ದನ್ನು ನಾನೇ ಕೇಳಿದ್ದೆ . ಆಗ ನಾನು
"
ಆಯೆ ಆಣ್ ಪೊಣ್ಣ್ ಅತ್ತ್ " ಎಂದಾಗ
"
ಆಣ್ ಆಂಡ ದಾದ ಆಂಡ್?"
ಎಂದು ಪ್ರಶ್ನಿಸಿದ್ದಳು. ಅಷ್ಟು ಸುಂದರವಾದ ಸ್ತ್ರೀ ವೇಷ ಉದಯ ನಾವಡರದ್ದು.

ನಾನು ಉದಯ ನಾವಡರನ್ನು, ಕಾಲದಲ್ಲಿ ಮಾತಾಡಿಸುವಾಗಲೆಲ್ಲಾ
"
ಕರ್ನಗೆ" ಎಂದೇ ಸಂಬೋಧಿಸುತ್ತಿದ್ದೆ.

ಅದೇ ಪ್ರಸಂಗದಲ್ಲಿ, ಸುಮಾರು ಘಂಟೆಗೆ, ಉದಯ ನಾವಡರ "ಬಾಲೆಮಾಣಿ" ಎಂಬ ಪುಂಡುವೇಷ. ಪಾತ್ರದಲ್ಲಿ ಉದಯ ನಾವಡರು ಪ್ರವೇಶಕ್ಕೆ ನೂರಕ್ಕೂ ಹೆಚ್ಚು ಧಿಗಿಣ ಹಾಕುತ್ತಿದ್ದರು. ಕಾಲದಲ್ಲಿ ಪುಂಡುವೇಷದಲ್ಲಿ ಪ್ರಸಿದ್ಧರಾದವರು ಮುಂಡಾಜೆ ಬಾಲಕೃಷ್ಣ ಶೆಟ್ಟಿಯವರು. ಮುಂಡಾಜೆಯವರಿಗೆ ಸರಿಸಾಟಿಯಾಗಿ ಮಿಂಚಿದ್ದರು, ಉದಯ ನಾವಡರು. ನನಗೆ ನೆನಪಿರುವಂತೆ ಬಹುಷಃ ಬಲದಿಂದ ಎಡಕ್ಕೆ ಧಿಗಿಣ ಹಾಕುತ್ತಿದ್ದರು. (ಸಾಮಾನ್ಯವಾಗಿ, ಎಡದಿಂದ ಬಲಕ್ಕೆ ಧಿಗಿಣ ಹಾಕುವುದು, ಆದರೆ, ನಾವಡರದ್ದು ವ್ಯತಿರಿಕ್ತ.)

ಗಯ್ಯಾಳಿ ಸ್ತ್ರೀ ಪಾತ್ರಗಳಲ್ಲೂ ನಾವಡರು ಮಿಂಚುತ್ತಿದ್ದರು. ಮಾತುಗಾರಿಕೆಯಲ್ಲಿ ಸ್ವಲ್ಪ "ಮೋಡಿ" ಇರುತ್ತಿದ್ದರೂ, ಅದೂ ಒಂದು ಆಕರ್ಷಣೀಯವಾಗಿದ್ದುದು ಉಲ್ಲೇಖನೀಯ.

ನಂತರ ಉದಯ ನಾವಡರು ಬೇರೆಬೇರೆ ಮೇಳ ಸೇರಿದರು. ಪುಂಡುವೇಷದಲ್ಲಿ ಮಿಂಚಿದಷ್ಟೇ ಸ್ತ್ರೀ ಪಾತ್ರದಲ್ಲೂ ಪ್ರಸಿದ್ಧಿ ಗಳಿಸಿದರು. ಲಕ್ಷ್ಮಣ, ಅಭಿಮನ್ಯು, ಬಭ್ರುವಾಹನ, ಲೀಲೆಯ ಕೃಷ್ಣ, ಭಾರ್ಗವ ಮುಂತಾದ ಪೌರಾಣಿಕ ಪಾತ್ರಗಳು ಅಂತೆಯೇ ತುಳು ಪ್ರಸಂಗಗಳ ಸಿರಿ, ಕಿನ್ನಿದಾರು, ಚೆನ್ನಯ, ಬುದಬಾರೆ, ಕರ್ನಗೆ ಮುಂತಾದ ಪಾತ್ರಗಳು ನಾವಡರಿಗೆ ಹೆಸರು ತಂದಿವೆ. ಮಂಗಳಾದೇವಿ ಮೇಳ ಬಹುಷಃ ನಾವಡರ ಇತ್ತೀಚೆಗಿನ ತಿರುಗಾಟದ ಮೇಳವಿರಬೇಕು. ನಂತರ ಉದಯ ನಾವಡರ ಪಾತ್ರ ನಾನು ನೋಡಲೇ ಇಲ್ಲ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಕಟೀಲಿನಲ್ಲಿ ಜರಗಿದ್ದ
"
ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್" ಉದ್ಘಾಟನಾ ಸಮಾರಂಭದಂದು ಸಹಾಯಧನ ಸ್ವೀಕರಿಸಲು ಬಂದಿದ್ದ ಉದಯ ನಾವಡರನ್ನು ಕಂಡು ಮಾತಾಡಿಸಿ ಜೊತೆಯಲ್ಲೇ ಕಾಫಿ ಕುಡಿದಿದ್ದೆ. ಆರೋಗ್ಯದ ಬಗ್ಗೆ ವಿಚಾರಿಸಿದಾಗ ಬೆನ್ನುನೋವಿನ ಬಗ್ಗೆ ತಿಳಿಸಿದ್ದರು.
"
ಕುಡ್ವರೇ , ಎಷ್ಟೋ ವರ್ಷಗಳ ನಂತರ ನಿಮ್ಮೊಂದಿಗೆ ಮಾತಾಡಿದೆ. ತುಂಬಾ ಸಂತೋಷವಾಯಿತು" ಎಂದಿದ್ದರು.
"
ಶೀಘ್ರದಲ್ಲೇ, ನಿಮ್ಮಿಂದ ಯಕ್ಷರಂಗ ಪ್ರವೇಶವಾಗಲಿ" ಎಂದಿದ್ದೆ . ಮೊನ್ನೆ ಪುನಃ ಯಕ್ಷರಂಗ ಪ್ರವೇಶ ಮಾಡಿದ ವಿಷಯ ತಿಳಿದು ತುಂಬಾ ಆನಂದವಾಗಿದೆ.

ಉದಯ ನಾವಡರಿಂದ ಇನ್ನಷ್ಟು ಸಾಧನೆ ಮೂಡಿ ಬರಲಿ, ಹಿಂದಿನ ಉದಯ ನಾವಡರ ನಿರ್ವಹಣೆ ಮಗದೊಮ್ಮೆ ನೋಡುವಂತಾಗಲಿ ಎಂದು ಆಶಿಸುತ್ತೇನೆ.

(ಮಾಹಿತಿಗಳನ್ನು ನನ್ನ ನೆನಪಿನಂತೆ ಬರೆದಿದ್ದೇನೆ. ಏನಾದರೂ ವ್ಯತ್ಯಾಸಗಳಿದ್ದಲ್ಲಿ, ನಾವಡ ಸೋದರರ ಕ್ಷಮೆ ಯಾಚಿಸುತ್ತೇನೆ.)


O :-   ಎಂಶಾಂತರಾಮ ಕುಡ್ವಮೂಡಬಿದಿರೆ
                 M.  Shantharama Kudva, Moodabidri

No comments:

Post a Comment