Tuesday 31 May 2016

" ಷಷ್ಟಿ ಸಂಭೃಮ "

ಕಟೀಲು ಸೀತಾರಾಮ ಕುಮಾರರು ತಮ್ಮ ಜೀವನದ ೬೦ ನೇ ವರ್ಷಾಚರಣೆಯನ್ನು ಇಂದು ಪಾವಂಜೆ ದೇವಸ್ತಾನದಲ್ಲಿ ವಿಶಿಷ್ಟವಾಗಿ ಆಚರಿಸುತ್ತಿದ್ದಾರೆ . ತಮ್ಮ ಕಷ್ಟಕಾರ್ಪಣ್ಯದ ಕಾಲದಲ್ಲಿ , ಗೃಹ ನಿರ್ಮಾಣದ ಸಮಯದಲ್ಲಿ ಹಾಗೂ ತಮ್ಮ ಮಡದಿಗೆ ಐದು ಬಾರಿ ಮೆದುಳಿನ ಅಪರೇಶನ್ ಸಂದರ್ಭದಲ್ಲಿ ಹೆಗಲೆಣೆಯಾದ ೬೦ ಮಂದಿ ಆಢ್ಯ ಮಹನೀಯರನ್ನು ಗಣ್ಯರ ಸಮಕ್ಷದಲ್ಲಿ ಅಭಿನಂದಿಸಿ , ಸಂಮಾನಿಸಿ , ಗೌರವಿಸಲಿದ್ದಾರೆ.

೧೦.೧೦.೧೯೫೫ರಲ್ಲಿ ಶ್ರೀನಿವಾಸ - ಕಲ್ಯಾಣಿ ದಂಪತಿಯರ ಪುತ್ರರಾಗಿ ಜನಿಸಿದ ಸೀತಾರಾಮ ಕುಮಾರರು ಬಾಲ್ಯದಿಂದಲೇ, ಕಷ್ಟವನ್ನೇ ಹಂಚಿಕೊಂಡು ಬೆಳೆದವರು. ಆದರೂ , ತನ್ನ ಕಷ್ಟವನ್ನು ನೀಲ ಕಂಠನಂತೆ ನುಂಗಿ ಪ್ರೇಕ್ಷಕರಿಗೆ ಸಿಹಿಯನ್ನೇ ಹಂಚಿದವರು. ತನ್ನ ಆದಾಯದ ಬಹು ಪಾಲನ್ನು ತನ್ನ ಧರ್ಮಪತ್ನಿಯ ಔಷಧಿಗಾಗಿಯೇ ವ್ಯಯಿಸಬೇಕಾದ ಅನಿವಾರ್ಯತೆ ಸೀತಾರಾಮರದು.ಆದರೂ , ಈ ವ್ಯಥೆಯನ್ನೆಲ್ಲಾ ಮರೆತು ಪ್ರೇಕ್ಷಕರನ್ನು ಸದಾ ನಗಿಸುತ್ತಾ ರಂಗ ಪ್ರಜ್ಞೆಯನ್ನು ತೋರುತ್ತಿರುವದು ಬಹುತೇಕ ಅಭಿಮಾನಿಗಳಿಗೆ ತಿಳಿದಿಲ್ಲ ಎಂಬುದು ಸತ್ಯ ವಿಚಾರ.
ರಂಗಸ್ತಳದಲ್ಲಿ ಪಾದರಸದಂತೆ ಚುರುಕಾಗಿ ಓಡಾಡಿ , ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಶ್ರಮಿಸುವ ಕಲಾವಿದ. ಹಾಸ್ಯಕ್ಕೆ ಹೊಸ ಆನ್ವೇಷಣೆ ಮಾಡುತ್ತಾ , ಸೃಜನಶೀಲತೆ ಮೆರೆದ ಈ ಕಲಾವಿದ , ಯಕ್ಷಗಾನದ ಹೆಜ್ಜೆಗಳನ್ನು ಬ ಗುರುಮುಖೇನ ಕಲಿಯದೇ ನೋಡಿಯೇ ಕಲಿತದ್ದು ಎಂಬುದು ಒಂದು ದೊಡ್ಡ ಸಾಧನೆ .
ಸುಮಾರು ೨೦ ವರ್ಷಗಳ ಹಿಂದೆ "ಜಾಲತುಳಸಿ " ತುಳು ಪ್ರಸಂಗದಲ್ಲಿ, ರಂಗಸ್ತಳದಿಂದ ಆರು ಅಡಿಗಳಿಗಿಂತಲೂ ದೂರವಿರುವ ಟೆಂಟಿನ ಬ್ರಹತ್ ಮುಖ್ಯ ಕಂಬಕ್ಕೆ ಹಾರಿ, ಕಂಬದ ತುದಿ ಏರಿ , ತಲೆಕೆಳಗೆ, ಕಾಲು ಮೇಲೆ ಮಾಡಿ ನೇತಾಡುತ್ತಿದ್ದಾಗ, ಪ್ರೇಕ್ಷಕರು ಈ ಸಾಹಸಕ್ಕೆ ಚಪ್ಪಾಳೆ ತಟ್ಟುತ್ತಿದರು.
ಆದರೂ , ನಾನು ಮಾತ್ರ ಸೀತಾರಾಮರಲ್ಲಿ ಈ ಬಗ್ಗೆ ಆಕ್ಷೇಪಿಸುತ್ತಿದ್ದೆ.
" ಸೀತಾರಾಮರೇ, ಈ ರೀತಿ ಮಾಡಬೇಡಿ. ಎಲ್ಲಿಯಾದರೂ ಹಾರುವಾಗ ಸಮತೋಲನ ತಪ್ಪಿದರೆ ಅಪಾಯ. ಈ ರೀತಿ ಮಾಡಿದ್ದಕ್ಕೆ ನಿಮಗೇನೂ ವಿಶೇಷವಾದ ಎಕ್ಸ್ಟ್ರಾ ಸಂಬಳ ದೊರಕುವದಿಲ್ಲ. " ಎಂದು ಎಚ್ಚರಿಸಿದ್ದರೂ,
"ಪ್ರೇಕ್ಷಕರ ತೃಪ್ತಿಯೇ ನನ್ನ ತೃಪ್ತಿ "
ಎಂದು ಹೇಳುತಿದ್ದರು.
ಒಂದು ದಿನ, ನಾನು ಎಚ್ಚರಿಸಿದಂತೆ , ಸಮತೋಲನ ತಪ್ಪಿ ನೆಲಕ್ಕೆ ಬಿದ್ದರು. ಆದರೂ , ಅಪಾಯವೇನೂ ಆಗಲಿಲ್ಲ. ಪಾತ್ರ ಚಿತ್ರಣದಲ್ಲಿ ಯ ಅವರ ತನ್ಮಯತೆಗಾಗಿ ಈ ಪ್ರಸಂಗವನ್ನು ಉಲ್ಲೇಖಿಸುತಿದ್ದೇನೆ.
" ಶ್ರೀ ದೇವಿ ಮಹಾತ್ಮೆ " ಯ ಕೊನೆಯಲ್ಲಿ ಬರುವ ರಕ್ತೇಶ್ವರಿಯ ಪಾತ್ರ ನೋಡಲು ಪ್ರೇಕ್ಷಕರು ಈಗಲೂ ಮುಗಿಬೀಳುತಿದ್ದಾರೆ. ಸಿಯಾಳವನ್ನು ಬಾಯಿಂದ ಕಚ್ಚಿ ಕೊನೆಗೆ ತಲೆಗೆ ಒಡೆದು ನೀರು ಕುಡಿಯುವ ಆ ದ್ರಶ್ಯವನ್ನು ಪ್ರೇಕ್ಷಕರು ಅಪಾರವಾಗಿ ಮೆಚ್ಚುತ್ತಾರೆ . ಇದೂ ಅಪಾಯಕಾರಿಯಾದರೂ , ಪ್ರೇಕ್ಷಕರ ತ್ರಪ್ತಿಗಾಗಿ ಮಾಡುತಿದ್ದರು. "ಶ್ವೇತಕುಮಾರ ಚರಿತ್ರೆ " ಯ ಪ್ರೇತದ ಪಾತ್ರ ಮಾಡಿ ಕಂಬ , ಮರಗಳಲ್ಲಿ ನೇತಾಡಿ ರಂಜಿಸುತ್ತಿರುವದು ಪ್ರೇಕ್ಷಕರ ನಿರೀಕ್ಷೆ ಸುಳ್ಳಾಗಬಾರದು ಎಂಬುದಕ್ಕಾಗಿ . ಸೀತಾರಾಮರು ಪ್ರೇಕ್ಷಕರಿಗೆ ಅಪಾರ ಗೌರವ ಕೊಡುತ್ತಿದ್ದರು ಎಂಬುದಕ್ಕೆ ಇದು ಸಾಕ್ಷಿ.
ಸುಮಾರು ೩೦ ವರ್ಷಗಳ ಹಿಂದೆ ಸೀತಾರಾಮರು ಕದ್ರಿ ಮೇಳದ ಕಲಾವಿದರಾಗಿರುವಾಗ ಮಳೆಗಾಲದಲ್ಲಿ ಜೀವನೋಪಾಯಕ್ಕಾಗಿ, ಮಂಗಳೂರಿನ ಸೆಂಟ್ರಲ್ ಮಾರ್ಕೇಟ್ ನಲ್ಲಿ ಕೆಲಸ ಮಾಡುತಿದ್ದರು.ನಾನೊಮ್ಮೆ ಇದನ್ನು ನೋಡಿ ದುಃಖಿತನಾದಾಗ ಸೀತಾರಾಮರೇ, ಆ ತರಕಾರಿ ವ್ಯಾಪಾರಿ ತನ್ನ ಮಿತ್ರನೆಂದೂ, ದುಡಿದೇ ತಿನ್ನಬೇಕೆಂಬುದೇ , ನನ್ನ ಉದ್ಧೇಶವೆಂದೂ ತಿಳಿಸಿದಾಗ, ನಾನು , ಸೀತಾರಾಮರ ಸ್ವಾಭಿಮಾನ ಕಂಡು ನಿರಾಳನಾದೆ.
ಎಷ್ಟೇ ಕಷ್ಟ ಬಂದರೂ ಸೀತಾರಾಮರು ಆತ್ಮಾಭಿಮಾನ ಕಳಕೊಂಡವರಲ್ಲಾ. ಯಾರಲ್ಲೂ
" ದೇಹಿ " ಎಂದವರಲ್ಲ. ( ಆತ್ಮೀಯ ಮಿತ್ರನಾದ ನನ್ನಲ್ಲೂ )
೨೫ ವರ್ಷಗಳ ಹಿಂದೆ ಸೀತಾರಾಮರು ಬೆಳಿಗ್ಗೆ ೧೧ ಗಂಟೆಗೆ ನನ್ನ ಅಂಗಡಿಗೆ ಬಂದರು. ಕಾಫಿ ಎಲ್ಲಾ ಆಯಿತು. ೧ ಗಂಟೆ ವರೆಗೂ ನನ್ನಲ್ಲಿ ಮಾತಾಡುತ್ತಾ ಷರ್ಟಿನ ಕಿಸೆಯಿಂದ ಬಂಗಾರದ ಚೈನ್ ತೆಗೆದು , ನನ್ನ ಕೈಗೆ ಕೊಟ್ಟರು. ನಂತರ, ಇದನ್ನು ನಿಮ್ಮಲ್ಲಿಟ್ಟು, ನನಗೆ ₹ ೨೦೦೦ / ಕೊಡಬೇಕು ಎಂದರು.ನನಗೆ ಕೋಪ ನೆತ್ತಿಗೇರಿತು.
" ನಾನು ನಿಮ್ಮ ಮಿತ್ರ ಮಾತ್ರ. ಬಡ್ಡಿ ವ್ಯಾಪಾರಿಯಲ್ಲ ."
ಎಂದು ಚೈನನ್ನು ಹಿಂದಿರುಗಿಸಿದೆ. ಪೆಚ್ಚು ಮುಖ ಮಾಡಿ, ಸುಮ್ಮನೇ ಕುಳಿತರು. ೨ ಘಂಟೆಯಾದಾಗ , ನಾನು ಊಟಕ್ಕೆ ಹೊರಟಾಗ, ಸೀತಾರಾಮರನ್ನೂ ಕರಕೊಂಡು ಹೋದೆ. ಊಟ ಆದ ಮೇಲೆ, ಸೀತಾರಾಮರ ಕೈಗೆ ₹ ೨೦೦೦ ಕೊಟ್ಟು
" ನಿಮಗೆ ಹಣ ಬೇಕಾದರೆ ನೇರವಾಗಿ ಕೇಳುವದು ಬಿಟ್ಟು ಚೈನನ್ನು ಅಡವಿಟ್ಟು ಕೇಳಬೇಕೇ? "
ಎಂದಾಗ ಸೀತಾರಾಮರು
" ಕುಡ್ವರೇ ,ನಿಮ್ಮ ಸ್ನೇಹವನ್ನು ಹಣಕ್ಕಾಗಿ ದುರುಪಯೋಗ ಪಡಿಸಬಾರದೆಂಬುದಕ್ಕಾಗಿ , ನಾನು, ಆ ರೀತಿ ಮಾಡಿದೆ " ಎಂದರು. ಒಂದೇ ತಿಂಗಳಲ್ಲಿ, ಮುಂಬೈ ತಿರುಗಾಟ ಮುಗಿಸಿ ನನ್ನ ಹಣ ಹಿಂದಿರುಗಿಸಿದರು.
( ಈ ವಿಷಯ ನನಗೆ ನೆನಪಿರಲಿಲ್ಲ. ಕಳೆದ ವರ್ಷ ಗಣೇಶ ಕೊಲೆಕಾಡಿಯವರ ಗೃಹ ಪ್ರವೇಶದಂದು, ಸೀತಾರಾಮರೇ , ಇದನ್ನು ನೆನಪಿಸಿದ್ದರು. ದಯವಿಟ್ಟು ಗಮನಿಸಿ , ಸೀತಾರಾಮರ ಸ್ವಾಭಿಮಾನ ಕ್ಕೆ ಧೃಷ್ಟಾಂತವಾಗಿ ಈ ಘಟನೆ ಬರೆದಿದ್ದೇನೆ . )

ಬಡಗು ತಿಟ್ಟಿಗೆ ಸೀತಾರಾಮರನ್ನುಪರಿಚಯಿಸಿದ್ದು ದಿ.ಚೆನ್ನಪ್ಪ ಶೆಟ್ಟರು. ಸೇರಿದ ಎರಡೇ ವರ್ಷದಲ್ಲಿ ಜನಪ್ರಿಯತೆ ಗಳಿಸಿ ಚೆನ್ನಪ್ಪ ಶೆಟ್ಟರಿಗಿಂತಲೂ ಹೆಚ್ಚಿನ ಸಂಬಳ ಪಡೆಯುವಷ್ಟು ಪ್ರಸಿಧ್ಧರಾದರು. ಆ ಮಟ್ಟಕ್ಕೆ ಬೆಳೆದರು.
ಈ ವಿಷಯ ನನ್ನಲ್ಲಿ ತಿಳಿಸಿದ ಚೆನ್ನಪ್ಪ ಶೆಟ್ಟರು
" ಕುಡ್ವರೇ, ಸೀತಾರಾಮನಿಗೆ ಅಷ್ಟು ಸಂಬಳ ದೊರಕಬೇಕಾದುದು ನ್ಯಾಯವೇ. ಏಕೆಂದರೆ , ಸೀತಾರಾಮ ಮಾರ್ಕೆಟ್ ಕಲಾವಿದ. ಸೀತಾರಾಮ ಇದ್ದಾರೆಂದರೆ, ಗೇಟ್ ಕಲೆಕ್ಷನ್ ಜಾಸ್ತಿ ಎಂದೇ ಲೆಕ್ಕ " ಎಂದಿದ್ದರು.
ಸದಾ ಓದುತ್ತಾ ಸಾಹಿತ್ಯ ಸಂಗೃಹಿಸುವ ಸೀತಾರಾಮರ ಅರ್ಥಗಾರಿಕೆಯೂ ಉಲ್ಲೇಖನೀಯವೇ .
ಹೊಸನಗರ ಮೇಳದವರ " ಮಹರ್ಷಿ ಅಗಸ್ತ್ಯ " ಪ್ರಸಂಗದಲ್ಲಿ ಮಂತ್ರವಾದಿಯಾಗಿ ವಾಮಾಚಾರಕ್ಕೆ ಬೇಕಾದ ೩೦೦ ಕ್ಕೂ ಅಧಿಕ ವಸ್ತುಗಳ ಹೆಸರನ್ನು ಹೇಳುತ್ತಿದ್ದರು. ಇದು ಹಾಸ್ಯಕ್ಕಾಗಿ ಹೇಳಿದ್ದಲ್ಕವೆಂದೂ, ವಾಮಾಚಾರ ಗೃಂಥಗಳಲ್ಲಿ ಇದರ ಉಲ್ಲೇಖವಿದೆಯೆಂದೂ ಚೆನ್ನಪ್ಪ ಶೆಟ್ಟರು ನನ್ನಲ್ಲಿ ತಿಳಿಸಿದ್ದರು . ಶ್ರೀಕೃಷ್ಣನ ನೂರಕ್ಕೂ ಮಿಕ್ಕಿ ಹೆಸರನ್ನೂ , ಪ್ರಕೃತಿಯ ವರ್ಣನೆಯನ್ನೂ ಪಟಪಟನೇ ನಿರರ್ಗಳವಾಗಿ ಹೇಳುವಾಗ ಯಾರಾದರೂ ಚಪ್ಪಾಳೆ ತಟ್ಟಲೇಬೇಕು. .
ಸೀತಾರಾಮರ ಇಂದಿನ ವಿಶಿಷ್ಟ
" ಷಷ್ಟಿ ಸಂಭೃಮ "
ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ .
ಎಂ. ಶಾಂತರಾಮ ಕುಡ್ವ,
ಮೂಡಬಿದಿರೆ

No comments:

Post a Comment