Tuesday 31 May 2016

ಕೆ.ಶಿವರಾಮ ಜೋಗಿ , ಬಿ.ಸಿ.ರೋಡ್

ಎಂ. ಶಾಂತರಾಮ ಕುಡ್ವ
ಮೂಡಬಿದಿರೆ
______________________________
ಕೆ.ಶಿವರಾಮ ಜೋಗಿ , ಬಿ.ಸಿ.ರೋಡ್
ತಮ್ಮ ಯಕ್ಷ ತಿರುಗಾಟದ ೬೦ ನೇ ವರ್ಷಾಚರಣೆಯಲ್ಲಿ .
ಗುರುವಪ್ಪ ಜೋಗಿ - ಸೀತಮ್ಮ ದಂಪತಿಗಳ ಸುಪುತ್ರರಾಗಿ ೦೭.೦೬.೧೯೪೧ ರಂದು ಶಿವರಾಮ ಜೋಗಿಯವರ ಜನನವಾಯಿತು.ಸುಪ್ರಸಿಧ್ಧ ಯಕ್ಷಗಾನ ಕಲಾವಿದರಾದ ಕುಡಾಣ ಗೋಪಾಲಕೃಷ್ಣ ಭಟ್ , ವಿಟ್ಲ ಗೋಪಾಲಕೃಷ್ಣ ಜೋಷಿಯವರಲ್ಲಿ ಶಿಷ್ಯರಾಗಿ ನಾಟ್ಯಾಭ್ಯಾಸ ಪಡೆದು ಅರ್ಥಗಾರಿಕೆಯನ್ನು ಶೇಣಿ ಗೋಪಾಲಕೃಷ್ಣ ಭಟ್ಟರ ಶಿಷ್ಯರಾಗಿ ಕಲಿತರು . ( ಮೂವರು ಗುರುಗಳ ಹೆಸರೂ ಗೋಪಾಲಕೃಷ್ಣ )
ತಮ್ಮ ೧೫ ನೇ ಪ್ರಾಯದಲ್ಲಿ ಕೂಡ್ಲು ಮೇಳ ಸೇರಿ , ನಂತರ ಮೂಲ್ಕಿ ಮೇಳ ಸೇರಿದರು . ನಂತರ ಸುರತ್ಕಲ್ ಮೇಳ ಸೇರಿದ ಜೋಗಿಯವರಿಗೆ , ಸುರತ್ಕಲ್ ಮೇಳ ತಮ್ಮ ಅಪ್ರತಿಮ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಯಿತು . ಸುಪ್ರಸಿಧ್ಧ ಕಲಾವಿದರಾದ ಅಗರಿ ಶ್ರೀನಿವಾಸ ಭಾಗವತರು , ಅಗರಿ ರಘುರಾಮ ಭಾಗವತರು , ಪದ್ಯಾಣ ಗಣಪತಿ ಭಟ್ , ಶಂ.ನಾ. ಸಾಮಗ , ಶೇಣಿ , ತೆಕ್ಕಟ್ಟೆ , ರಾ .ಸಾಮಗ , ವಿಟ್ಲ ಜೋಷಿ , ಕುಂಬ್ಳೆ , ಗೋ. ಭಟ್ , ಕ್ರಿಶ್ಚನ್ ಬಾಬು , ಕೊಳ್ಯೂರು, ಕೊಕ್ಕಡ, ರಮೇಶಾಚಾರ್ಯ , ವೇಣೂರು, ಜಲವಳ್ಳಿ , ವಾ.ಸಾಮಗ ಮುಂತಾದ ಕಲಾವಿದರ ಒಡನಾಟ ದೊರಕಿತು. ಸುರತ್ಕಲ್ ಮೇಳ ತನ್ನ ತಿರುಗಾಟ ನಿಲ್ಲಿಸುವ ತನಕ ೪೦ ವರ್ಷಗಳ ತಿರುಗಾಟವನ್ನು ಮಾಡಿ ಸುರತ್ಕಲ್ ಮೇಳದ ಯಜಮಾನರಾದ ಕಸ್ತೂರಿ ಪೈ ಸಹೋದರರ ಪ್ರೀತಿಪಾತ್ರರಾದ ಕಲಾವಿದ ಎಂಬ ಹೆಸರು ಗಳಿಸಿದರು. ಉತ್ತಮ ವಾಹನ ಚಾಲಕರಾಗಿದ್ದ ಜೋಗಿಯವರು ಮೇಳದ ವಾಹನವನ್ನು ತಾವೇ ಚಲಾಯಿಸುತ್ತಿದ್ದರು . ಮಳೆಗಾಲದಲ್ಲಿ ಬಸ್ ಚಾಲಕರಾಗಿ ದುಡಿಯುತ್ತಿದ್ದರು . ಸುರತ್ಕಲ್ ಮೇಳಕ್ಕೆ ಹಾಗೂ ಯಜಮಾನರಾದ ವರದರಾಯ ಪೈಗಳ ನಿಷ್ಟಾವಂತ ಕಲಾವಿದರಾಗಿದ್ದರು .
ಸುರತ್ಕಲ್ ಮೇಳ ಘಟ್ಟ ಪ್ರದೇಶದಲ್ಲಿ ಅಪಾರ ಪ್ರಸಿಧ್ಧಿ ಪಡೆದ ಮೇಳ . ಘಟ್ಟದ ಪ್ರೇಕ್ಷಕರು , ಸುರತ್ಕಲ್ ಮೇಳವನ್ನು ಭಕ್ತಿಯಿಂದ ಕಾಣುವವರು. ಒಮ್ಮೆ ಘಟ್ಟದ ತಿರುಗಾಟದ ಸಮಯದಲ್ಲಿ ಡೇರೆ ಭರ್ತಿಯಾಯಿತು . ಆಗ ಕೆಲ ಒರಟು ಸ್ವಭಾವದ ಪ್ರೇಕ್ಷಕರು , ತಮಗೆ ಟಿಕೇಟ್ ಸಿಗಲಿಲ್ಲ ಎಂಬ ಕಾರಣದಿಂದ ಚೌಕಿಗೆ ಬಂದು ಗಲಭೆ ಎಬ್ಬಿಸಿದರು. ಪ್ರದರ್ಶನ ನಿಲ್ಲುವ ಹಂತ ಮುಟ್ಟಿದಾಗ ಶಿವರಾಮ ಜೋಗಿ ಹಾಗೂ ಮೇಳದ ಇನ್ನೋರ್ವ ನಿಷ್ಟಾವಂತ ಕಲಾವಿದರಾದ , ಈಗ ಯಕ್ಷಗಾನದಿಂದ ನಿವೃತ್ತರಾದರೂ , ಮೂಡಬಿದಿರೆ ಸುತ್ತಮುತ್ತ ಯಕ್ಷಗಾನೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ , ನನ್ನ ಸನ್ಮಿತ್ರರಾದ ಪುತ್ತಿಗೆ ಕುಮಾರ ಗೌಡರು , ಆಟಕ್ಕೆ ಬಳಸುವ ಖಡ್ಗವನ್ನು ಹಿಡಿದು , ಕೋಟಿ ಚೆನ್ನಯರಂತೆ ಆ ಒರಟರನ್ನು ಎದುರಿಸಲು ಮುಂದಾದಾಗ, ಆ ಒರಟರು ಹೆದರಿ ಪಲಾಯನ ಮಾಡಿದ್ದರು . ಪ್ರದರ್ಶನ ಮುಂದುವರಿಯಿತು .
( ಈ ಪ್ರಕರಣವನ್ನು ವರದರಾಯ ಪೈಗಳೇ ನನ್ನಲ್ಲಿ ತಿಳಿಸಿದ್ದರು )
ಜೋಗಿಯವರು ಪ್ರಾರಂಭದಲ್ಲಿ ಪುಂಡು ವೇಷಗಳಲ್ಲಿ ಮಿಂಚಿ ಅಪಾರ ಹೆಸರು ಗಳಿಸಿದವರು. ದಿನಂಪ್ರತೀ ಕನಿಷ್ಟ ನೂರು " ಧಿಗಿಣ " ಹೊಡೆಯದೇ ರಂಗದಿಂದ ಹೊರ ಬರುತ್ತಿರಲಿಲ್ಲ. ಅಭಿಮನ್ಯು, ಲೀಲೆಯ ಕೃಷ್ಣ ,
ಬಬ್ರುವಾಹನ, ಕುಶ, ಚಂಡ, ಭಾರ್ಗವ ಮುಂತಾದ ಪಾತ್ರಗಳು ಜೋಗಿಯವರ " ಮಾಸ್ಟರ್ ಪೀಸ್ " ಆಗಿತ್ತು .
ಪುರಾಣಗಳ ಬಗ್ಗೆ ಇರುವ ಅಪಾರ ಜ್ಞಾನ , ದೈವದತ್ತವಾಗಿ ಬಳುವಳಿಯಾಗಿ ಬಂದ ಕಂಚಿನ ಕಂಠ, ಆಕರ್ಷಕ ರೂಪ , ಉತ್ತಮ ಅಂಗಸೌಷ್ಟವ , ಶಾಸ್ತ್ರೀಯವಾದ ಯಕ್ಷಗಾನ ನಾಟ್ಯ , ಶೃತಿಬಧ್ಧವಾಗಿರುವ ನಿರರ್ಗಳ ಮಾತುಗಾರಿಕೆ , ಸಂಗೀತದ ಜ್ಞಾನ ಎಲ್ಲಾ ಸೇರಿ ಜೋಗಿಯವರು ವಿಜೃಂಭಿಸಿದರು . ಅಭಿಮನ್ಯು, ಬಬ್ರುವಾಹನ , ಕುಶ, ಚಂಡ, ಭಾರ್ಗವ ಮುಂತಾದ ಪಾತ್ರಗಳು ಜೋಗಿಯವರಿಗೆ ಅಪಾರ ಪ್ರಸಿಧ್ಧಿ ತಂದು ಕೊಟ್ಟಿವೆ. ನಕ್ಷತ್ರಿಕ , ವಿಶ್ವಾಮಿತ್ರ , ಕೌಶಿಕ, ಋತುಪರ್ಣ, ವಾಲಿ ,ರಾವಣ, ದೇವವೃತ, ಭೀಷ್ಮ , ಹನೂಮಂತ , ಇಂದ್ರಜಿತು, ಶಿಶುಪಾಲ , ಕೌಂಡ್ಲಿಕ , ಕರ್ಣ , ಭೃಗು , ಶನೀಶ್ವರ , ಪಾಪಣ್ಣ ವಿಜಯದ ಚಂದ್ರಸೇನ ಮುಂತಾದ ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ . ಇಪ್ಪತ್ತು ವರ್ಷಗಳ ಹಿಂದೆ, ಸುರತ್ಕಲ್ ಮೇಳದಲ್ಲಿರುವಾಗ ಸುಪ್ರಸಿಧ್ಧ ಪುಂಡು ವೇಷಧಾರಿಯಾಗಿದ್ದ ವೇಣೂರು ಸದಾಶಿವ ಕುಲಾಲರೊಂದಿಗೆ ( ಇವರೂ ಈಗ ಹೊಸನಗರ ಮೇಳದಲ್ಲಿದ್ದಾರೆ ) ಜೋಡಿ ಪುಂಡು ವೇಷಧಾರಿಯಾಗಿ , ಕುಲಾಲರು ನೂರಕ್ಕೂ ಮಿಕ್ಕಿ " ಧಿಗಿಣ " ಹೊಡೆದಾಗ ಜೋಗಿಯವರೂ , ಅಷ್ಟೇ ಧಿಗಿಣ ಹೊಡೆದು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದ್ದರು. ( ಆಗ ಜೋಗಿಯವರಿಗೆ ೫೫ ವರ್ಷ ಪ್ರಾಯ )
ಕಿರಾತ ಶ್ರೀನಿವಾಸ , ಕುಮಾರರಾಮ, ವೀರಚಂದ್ರ ಮುಂತಾದ ಪಾತ್ರಗಳಿಗೆ ಮೂಲಚಿತ್ರಣ ಕೊಟ್ಟವರು ಜೋಗಿಯವರೇ .ಈ ಪಾತ್ರಗಳು ಜೋಗಿಯವರ ಪ್ರತಿಭಾ ಸಾಮರ್ಥ್ಯಕ್ಕೆ ದ್ಯೋತಕವಾಗಿವೆ .
ಸುರತ್ಕಲ್ ಮೇಳದವರಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟ ಇನ್ನೊಂದು ಪ್ರಸಂಗ " ಶ್ರೀ ಶನೀಶ್ವರ ಮಹಾತ್ಮೆ " ಈ ಪ್ರಸಂಗದಲ್ಲಿ ಶೇಣಿಯವರ ಧೀರೋದ್ದಾತ ನಿಲುವಿನ ವಿಕ್ರಮಾದಿತ್ಯ ಹಾಗೂ ಜಲವಳ್ಳಿಯವರ ಪೀಡಕ ವ್ಯಕ್ತಿತ್ವದ ಶನೀಶ್ವರನ ಪಾತ್ರಗಳು ಅಪಾರ ಜನಪ್ರಿಯತೆ ಗಳಿಸಿತ್ತು . ಮುಂದೆ ಜಲವಳ್ಳಿಯವರು ಸುರತ್ಕಲ್ ಮೇಳ ಬಿಟ್ಟ ನಂತರ ಶನೀಶ್ವರನ ಪಾತ್ರವನ್ನು ಜೋಗಿಯವರು ಸಮರ್ಥವಾಗಿ ನಿರ್ವಹಿಸಿದ್ದರು.
ತುಳುಪ್ರಸಂಗಗಳು ಯಕ್ಷರಂಗಕ್ಕೆ ಪ್ರವೇಶವಾದ ಘಟ್ಟದಲ್ಲಿ ಕೋಟಿ , ಚೆನ್ನಯ, ದೇವುಪೂಂಜ, ಕಾಂತಬಾರೆ, ಕೋರ್ದಬ್ಬು ಮುಂತಾದ ಪಾತ್ರಗಳನ್ನು ಅತ್ಯಂತ ಚೆನ್ನಾಗಿ ನಿರ್ವಹಿಸಿದರು. ಕಾಲ್ಪನಿಕ ತುಳು ಪ್ರಸಂಗಗಳಲ್ಲಿ ಖಳ ಹಾಗೂ ನಾಯಕ ಪಾತ್ರಗಳಲ್ಲಿ ಏಕಪ್ರಕಾರವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು .ಪಾತ್ರಗಳನ್ನು ಹೊಂದಿಕೊಂಡು ಸ್ವರದ ಏರಿಳಿತಗಳನ್ನು ಹೊಂದಿಸಿ ಮಾತಾಡುವ , ಪಾತ್ರದ ಹೊರ ಒಳಗನ್ನು ಅರಿತು ನಿರ್ವಹಣೆ ಮಾಡುವ ಕಲೆಯಲ್ಲಿ ಸಿಧ್ಧ ಹಸ್ತರು ಜೋಗಿಯವರು.
ಶೇಣಿಯವರೇ ಮೂಲಚಿತ್ರಣ ಕೊಟ್ಟ
" ಬಪ್ಪಬ್ಯಾರಿ " ಪಾತ್ರ ವನ್ನು ಶೇಣಿಯವರು ಸುರತ್ಕಲ್ ಮೇಳದಿಂದ ನಿವೃತ್ತರಾದ ನಂತರ , ಶೇಣಿಯವರದ್ದೇ ಸೂಚನೆಯಂತೆ ಜೋಗಿಯವರೇ , ನಿರ್ವಹಿಸಿ , ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು. ಒಮ್ಮೆ ಬಜ್ಪೆಯಲ್ಲಿ ಯಕ್ಷಗಾನ ಕಲಾವಿದರಾದ ಬಜ್ಪೆ ದೇರಣ್ಣರವರು ಮಳೆಗಾಲದಲ್ಲಿ
" ಬಪ್ಪನಾಡು ಕ್ಷೇತ್ರ ಮಹಾತ್ಮೆ " ಟಿಕೇಟಿನ ಆಟವನ್ನು ಸಂಯೋಜಿಸಿದ್ದರು
" ಅಗರಿ ಶ್ರೀನಿವಾಸ ಭಾಗವತರ ಹಾಡು ಹಾಗೂ ಶೇಣಿಯವರ ಬಪ್ಪಬ್ಯಾರಿ ನೋಡಲು ಮರೆಯದಿರಿ "
ಎಂದು ವಿಶೇಷ ಆಕರ್ಷಣೆಯಾಗಿ ಕರಪತ್ರದಲ್ಲಿ ನಮೂದಿಸಿದ್ದರು. ಆದರೆ , ಅಂದು ಶೇಣಿಯವರು ತೀವೃ ಅನಾರೋಗ್ಯದಿಂದಾಗಿ ಬರಲಾಗಲಿಲ್ಲ. ಆದರೆ , ಅಗರಿಯವರು ಶೇಣಿಯವರ ಹೊರತಾಗಿ ಬೇರಾರದೇ ಬಪ್ಪಬ್ಯಾರಿಗೆ ಪದ್ಯ ಹೇಳುವವರಲ್ಲ . ಶೇಣಿಯವರಿಲ್ಲದ ಕಾರಣ ತಾನೂ ಹೊರಡುವದಾಗಿ ಅಗರಿಯವರಿಂದ ಸೂಚನೆ ಬಂತು . ಕಂಗಾಲಾದ ದೇರಣ್ಣರವರು ಅಳುವದೊಂದೇ ಬಾಕಿ. ಅಗರಿಯವರು ನನ್ನ ತಂದೆಯವರಾದ ದಿ. ಸುಂದರ ಕುಡ್ವರ ಆತ್ಮೀಯರು. ಅಗರಿಯವರು ಆ ದಿನ ನಮ್ಮ ಮನೆಯಲ್ಲೇ ಊಟ ಮಾಡಿ ನನ್ನ ತಂದೆಯವರೊಂದಿಗೆ ಮಾತಾಡುತ್ತಿದ್ದರು. ಆಗ ಬಂದ ದೇರಣ್ಣರು ನನ್ನ ತಂದೆಯವರಲ್ಲಿ ವಿಷಯ ತಿಳಿಸಿ , ಅಗರಿಯವರನ್ನು ಒಪ್ಪಿಸಲು ಕೇಳಿಕೊಂಡರು. ಕೊನೆಗೆ ತಂದೆಯವರ ಸಂಧಾನದಿಂದ ಅಗರಿಯವರು ಒಂದು ಷರ್ತದ ಮೇರೆಗೆ ಭಾಗವತಿಕೆಗೆ ಒಪ್ಪಿದರು .
" ಶಿವರಾಮ ಜೋಗಿ ಬಪ್ಪಬ್ಯಾರಿ ಮಾಡುವದಾದರೆ ನಾನು ಪದ್ಯ ಹೇಳುತ್ತೇನೆ . ಬೇರೆ ಯಾರದ್ದೇ ಆದರೂ ನನ್ನಿಂದ ಸಾಧ್ಯವಿಲ್ಲ "
ಕೊನೆಗೆ ಅದೇ ರೀತಿ ಜೋಗಿಯವರೇ ಬಪ್ಪಬ್ಯಾರಿ ಪಾತ್ರ ವಹಿಸಿ , ಆಟ ನೆರವೇರಿತು.
ಈ ಘಟನೆ ಯಾಕೆ ಉಲ್ಲೇಖಿಸಿದೆನೆಂದರೆ ಜೋಗಿಯವರ ಪ್ರತಿಭೆಯ ಬಗ್ಗೆ ಅಗರಿಯವರಿಗೆ ಇರುವ ಅಭಿಮಾನ ತಿಳಿಸಲು .
ಕಳೆದ ಹತ್ತು ವರ್ಷಗಳಿಂದ ಜೋಗಿಯವರು ತೆಂಕುತಿಟ್ಟಿನ ಪ್ರಸಿಧ್ಧ ಮೇಳವಾದ ಹೊಸನಗರ ಮೇಳದ ಪ್ರಧಾನ ಕಲಾವಿದರಾಗಿದ್ದಾರೆ .
ಈ ವರ್ಷ ತಮ್ಮ ನಿರಂತರ ತಿರುಗಾಟದ " ೬೦ " ನೇ ವರ್ಷದ ಹೊಸ್ತಿಲಲ್ಲಿ ಜೋಗಿಯವರಿದ್ದಾರೆ . ಧರ್ಮಪತ್ನಿಯಾದ ಶ್ರೀಮತಿ ಲತಾ ಹಾಗೂ ಪುತ್ರಿ ಸೌಮ್ಯಾ ಹಾಗೂ ಪುತ್ರ ಸುಮಂತ್ ರಾಜ್ ರೊಂದಿಗೆ ಬಿ.ಸಿ.ರೋಡ್ ಊರಲ್ಲಿ ವಾಸಿಸುತ್ತಿದ್ದಾರೆ .
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ,
ಡಾ|ಕೀಲಾರು ಪ್ರಶಸ್ತಿ , ಡಾ| ಶೇಣಿ ಪ್ರಶಸ್ತಿ , ಕುರಿಯ ಪ್ರಶಸ್ತಿ , ಕನ್ನಡ ಮತ್ತು ಸಂಸ್ಕ್ರತಿ ಪ್ರಶಸ್ತಿ ಸಹಿತ ನೂರಕ್ಕೂ ಮಿಕ್ಕಿ ಸಂಮಾನ ಸ್ವೀಕರಿಸಿದ ಜೋಗಿಯವರಿಗೆ ಇನ್ನಷ್ಟು ಪ್ರಶಸ್ತಿ , ಸಂಮಾನಗಳು ದೊರಕಲಿ ಎಂದು ಹಾರೈಸುತ್ತೇನೆ .
ಎಂ. ಶಾಂತರಾಮ ಕುಡ್ವ
ಮೂಡಬಿದಿರೆ






ನಾನು ನಿನ್ನೆ ಮೂಡಬಿದಿರೆಯಲ್ಲಿ ಹೊಸನಗರ ಮೇಳದವರ " ಶ್ರೀನಿವಾಸ ಕಲ್ಯಾಣ " ಪ್ರಸಂಗ ನೋಡಿದೆ. ಸಂಘಟಕರು ನನ್ನಲ್ಲಿ ಸಮಾಲೋಚಿಸಿ ಆ ಪ್ರಸಂಗ ಇಟ್ಟಿದ್ದರು .ಆದರೆ ನಿನ್ನೆ ೭ ಮಂದಿ ಕಲಾವಿದರು ರಜೆಯಲ್ಲಿದ್ದ ಕಾರಣ , ಪಾತ್ರಗಳೆಲ್ಲಾ ಬದಲಾಗಿ ಹೊಸನಗರ ಮೇಳದ ಹಿರಿಯ ಕಲಾವಿದರಾದ ಶಿವರಾಮ ಜೋಗಿಯವರಿಗೆ " ಕಿರಾತ ಶ್ರೀನಿವಾಸ " ಎಂದು ಮೊದಲ ದಿನವೇ ಮೆನೇಜರ್ ತಿಳಿಸಿದ್ದರು. ಆ ಕಾರಣ ನಾನು ನಿನ್ನೆ ಎಲ್ಲಾ ಕೆಲಸ ಬದಿಗಿರಿಸಿ ಆಟಕ್ಕೆ ಹೋದೆ.ಶಿವರಾಮ ಜೋಗಿಯವರ ಕಿರಾತ ಪಾತ್ರ ನೋಡಬೇಕೆಂದು ಎಷ್ಟೋ ದಿನಗಳಿಂದ ನಾನು ಹಂಬಲಿಸಿದ್ದೆ . ಕಳೆದ ತಿಂಗಳು ಅಲಂಗಾರಿನ ಆಟದಂದೂ ನಾನು ಜೋಗಿಯವರಲ್ಲಿ ಈ ಅಭಿಪ್ರಾಯ ತಿಳಿಸಿದ್ದೆ .ಆಗ ಜೋಗಿಯವರು ,
" ಏನು ಮಾಡುವದು ಕುಡ್ವರೇ , ನನಗೆ ಪ್ರಾಯವಾಯಿತಲ್ಲಾ " ಎಂದಿದ್ದರು.
ನನಗೆ ಜೋಗಿಯವರ ಕಿರಾತ ಪಾತ್ರ ನೋಡಬೇಕೆಂಬ ಹಂಬಲ ಮೂಡಿದ್ದೇಕೆಂದರೆ , ಜೋಗಿಯವರ ಈ ಪಾತ್ರವನ್ನು ಎಷ್ಟೋ ಬಾರಿ ನೋಡಿದವ ನಾನು.
ಅಗರಿ ಶ್ರೀನಿವಾಸ ಭಾಗವತರಿಂದ ರಚಿಸಲ್ಪಟ್ಟ " ಶ್ರೀ ತಿರುಪತಿ ಕ್ಷೇತ್ರ ಮಹಾತ್ಮೆ " ಸುರತ್ಕಲ್ ಮೇಳದವರಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟ ಪ್ರಸಂಗ . ಆ ಸಮಯದಲ್ಲಿ ಜೋಗಿಯವರು ಭೃಗು ಪಾತ್ರ ಮಾಡಿ " ಕಿರಾತ ಶ್ರೀನಿವಾಸ " ಮಾಡುತ್ತಿದ್ದರು . ಕಿರಾತ ಪಾತ್ರಕ್ಕೆ ಪ್ರಥಮ ಚಿತ್ರಣ ಕೊಟ್ಟವರೇ ಜೋಗಿಯವರು ಎಂದು ಅನೇಕ ಮಂದಿಗೆ ಇನ್ನೂ ತಿಳಿದಿಲ್ಲ .ಅಂದು ಜೋಗಿಯವರ ಕಿರಾತ , ವೇಣೂರು ಸುಂದರ ಆಚಾರ್ಯರ ಸಖನ ಪಾತ್ರ ತುಂಬಾ ಪ್ರಸಿಧ್ಧಿಯಾಗಿತ್ತು .ಶೇಣಿಯವರು " ಮಾಧವ ಭಟ್ಟ " ರ ಪಾತ್ರ ನಿರ್ವಹಿಸುತ್ತಿದ್ದರು. ಜೋಗಿಯವರ ಕಿರಾತ ಪಾತ್ರ ಅಂದು ಉತ್ತಮ ಸಾಹಿತ್ಯದೊಂದಿಗೆ , ಚುರುಕಿನ ನಾಟ್ಯದೊಂದಿಗೆ , ಪ್ರೇಕ್ಷಕರ ಮನವನ್ನು ಗೆದ್ದಿತ್ತು . ಜೋಗಿಯವರು ಸಂಗೀತದ ಜ್ಞಾನವನ್ನೂ ಹೊಂದಿ ಸುಶ್ರಾವ್ಯವಾಗಿ ಹಾಡುವ ಸಾಮರ್ಥ್ಯವನ್ನೂ ಹೊಂದಿದ್ದರು. ಆದ ಕಾರಣ ಅವರು ಅಂದು ಕಿರಾತನ ಸಂಭಾಷಣೆಯಲ್ಲಿ ಸುಶ್ರಾವ್ಯವಾಗಿ ಹಾಡಿ , ಅದನ್ನೂ ಸಂಭಾಷಣೆಯ ಭಾಗವನ್ನಾಗಿ ಸೇರಿಸಿ ಕಿರಾತ ಪಾತ್ರಕ್ಕೆ ಅದ್ಭುತವಾದ ಚಿತ್ರಣ ಕೊಟ್ಟಿದ್ದರು. ಆದರೆ , ಈಗಿನ ಕಲಾವಿದರ ಚಿತ್ರಣವೇ ಬೇರೆಯೇ ಆಗಿತ್ತು .( ಇದೂ ಚೆನ್ನಾಗಿಯೇ ಇತ್ತು . ಆದರೆ ಜೋಗಿಯವರ ಚಿತ್ರಣಕ್ಕಿಂತಲೂ ಭಿನ್ನ)
ಸುಮಾರು ೨೫ ವರ್ಷಗಳ ಬಳಿಕ ನಿನ್ನೆ ಜೋಗಿಯವರ ಕಿರಾತ ನೋಡಿದೆ. ನಾಟ್ಯವನ್ನು ಹೊರತು ಪಡಿಸಿದರೆ , ಜೋಗಿಯವರ ಕಿರಾತ ಪಾತ್ರ ಹಿಂದಿನ ಜೋಗಿಯವರನ್ನೇ ನೆನಪಿಸಿತು. ಜೋಗಿಯವರಿಗೆ ಈಗ ೭೫ ವರ್ಷ .
ಪ್ರಸ್ತು ತ ಹೊಸನಗರ ಮೇಳದ ಅತ್ಯಂತ ಹಿರಿಯ ಕಲಾವಿದ .ಆದ ಕಾರಣ ನಾಟ್ಯದಲ್ಲಿ ನಾವು ಹಿಂದಿನ ಕ್ಷಮತೆ ನಿರೀಕ್ಷಿಸಬಾರದು. ಅಂತೂ ಪಾತ್ರೋಚಿತ ಸಂಭಾಷಣೆಯಿಂದ ಮಿಂಚಿದರು. ಪದ್ಮಾವತಿಯು
" ನಿಮ್ಮನ್ನು ತಂದೆಯವರಲ್ಲಿ ಹೇಳಿ ಬಂಧಿಸುತ್ತೇನೆ " ಎಂದಾಗ ,
" ತಾನು ಹಾಗೆಲ್ಲಾ ಬಂಧನಕ್ಕೊಳಗಾಗುವವನಲ್ಲ .ತಾನು ಪ್ರೇಮಬಂಧ, ಮಧುರ ಬಂಧ, ಶಾಂತಬಂಧ , ದಾಸ್ಯಬಂಧ , ಮಿತ್ರಬಂಧ ಹಾಗೂ ಭಕ್ತಿಬಂಧಗಳೆಂಬ ಬಂಧನಕ್ಕೆ ಮಾತ್ರ ಒಳಗಾಗುವವನು "
ಎಂದು , ಅದರ ವಿವರಣೆಯನ್ನು ತಮ್ಮ ಸುಮಧುರ ಕಂಠದಿಂದ ಪದ್ಯವನ್ನು ಹಾಡಿಯೇ ರಂಜಿಸಿದರು. ಕಾಲಮಿತಿ ಪ್ರದರ್ಶನವಾದ ಕಾರಣ ಹೇಳಬೇಕಾದುದ್ದನ್ನು ಚುಟುಕಾಗಿಯೇ , ಉತ್ತಮ ಸಾಹಿತ್ಯ ರಸಪೋಷಣೆಯೊಂದಿಗೆ ಹೇಳಿದ್ದು ಮೆಚ್ಚುಗೆ ಮೂಡಿಸಿತು . ಸಖನಾಗಿ ಬಂಟ್ವಾಳ ಹಾಗೂ ಪದ್ಮಾವತಿಯಾಗಿ ಹಿಲಿಯಾಣರ ಪ್ರಸ್ತುತಿಯೂ ಆಕರ್ಷಕವಾಗಿ ಪೂರಕವಾಗಿತ್ತು .
ಅಂತೂ ೨೫ ವರ್ಷಗಳ ನಂತರ ಜೋಗಿಯವರ ಕಿರಾತ ನೋಡಿ ತೃಪ್ತನಾದೆ .
Like
Comm

No comments:

Post a Comment