Tuesday 31 May 2016

ಆರ್. ಗಣೇಶ್ ರವರ ಅಷ್ಟಾವಧಾನ

ಆರ್. ಗಣೇಶ್ ರವರು ಅಷ್ಟಾವಧಾನ, ಶತಾವಧಾನಗಳಲ್ಲಿ ಪರಿಚಿತ ಹೆಸರು. ಅಪ್ರತಿಮ ವಿದ್ವಾಂಸರು. ಸಂಸ್ಕೃತ, ಕನ್ನಡ ಎರಡರಲ್ಲೂ ಶತಾವಧಾನ ಕಾರ್ಯಕ್ರಮ ನೀಡಿದವರು. ಅದ್ಭುತ ಸ್ಮರಣಶಕ್ತಿಯೊಂದಿಗೆ, ಎಲ್ಲಾ ಸಾಹಿತ್ಯ ಪ್ರಾಕಾರ ಬಲ್ಲವರು. ಇಂಜಿನಿಯರ್ ಪದವೀಧರರಾದರೂ ಸಾಹಿತ್ಯ, ಛಂದಸ್ಸು, ಪುರಾಣ, ಯಕ್ಷಗಾನದ ತೀವ್ರ ಆಸಕ್ತಿ ಹಾಗೂ ಅಪಾರ ಜ್ಞಾನ ಹೊಂದಿದ ಅಪರೂಪದ ಪ್ರತಿಭಾವಂತರು. ಕಂಪ್ಯೂಟರಿಗಿಂತಲೂ ವೇಗವಾಗಿ ಯೋಚಿಸುವ ಸಾಮರ್ಥ್ಯ ಉಳ್ಳವರು. ಮಂಟಪರ ಏಕವ್ಯಕ್ತಿ ಯಕ್ಷಗಾನಕ್ಕೆ ಸಾಹಿತ್ಯ ಹಾಗೂ ನಿರ್ದೇಶನವನ್ನೂ ನೀಡಿದ್ದಾರೆ.
ಸುಮಾರು ೨೫ ವರ್ಷಗಳ ಹಿಂದೆ ನಾನು ಆರ್. ಗಣೇಶರ "ಅಷ್ಟಾವಧಾನ" ಕಾರ್ಯಕ್ರಮಕ್ಕೆ ಹೋಗಿದ್ದೆ. ಅಂದು ದತ್ತಪದಿಯಲ್ಲಿ ಭಾಗವಹಿಸಿದ ಪೃಚ್ಛಕರೋರ್ವರು ಆರ್.ಗಣೇಶರಿಗೆ ಒಡ್ಡಿದ ಸವಾಲು ರೀತಿಯಲ್ಲಿತ್ತು.
"ಅವಧಾನಿಗಳೇ, ಕ್ಷಯಕಾಲರಾ, ಕಾಮಾಲೆ ಹಾಗೂ ಮಲೇರಿಯಾ ಶಬ್ದಗಳನ್ನು ಹೊಂದಿರುವಂತೆ ಸುಂದರ ಸ್ತ್ರೀಯನ್ನು ವರ್ಣಿಸಿರಿ"
ದತ್ತಪದಿಯವರು ನಿರ್ದಿಷ್ಟ ಛಂದಸ್ಸಿನಲ್ಲೇ ಕಾವ್ಯ ರಚಿಸಬೇಕೆಂದು ಹೇಳಿದ್ದರೂ (ವೃತ್ತ, ಷಟ್ಪದಿ, ಕಂದ ಅಥವಾ ರಗಳೆಯಲ್ಲಿ. ನನಗೆ ಛಂದಸ್ಸಿನ ಬಗ್ಗೆ ಹೇಳುವಂಥಹ ಜ್ಞಾನವಿಲ್ಲ.) ನಗೆ ಈಗ ಅದು ನೆನಪಲ್ಲಿ ಉಳಿದಿಲ್ಲ.
ದತ್ತಪದಿಯಲ್ಲಿ ಪೃಚ್ಛಕರು ನಾಲ್ಕು ಶಬ್ದ ಕೊಡುತ್ತಾರೆ. ಅದು ಇಂಗ್ಲಿಷ್, ಹಿಂದಿ, ತಮಿಳು ಯಾವುದೇ ಭಾಷೆಯಲ್ಲಿರಬಹುದು. ಆದರೆ ಅವಧಾನಿಯು ಶಬ್ದದ ಮುಂದೆ ಅಥವಾ ಹಿಂದೆ ಬೇರಾವುದಾದರೂ ಸ್ವರ ಯಾ ವ್ಯಂಜನ ಉಪಯೋಗಿಸಿ, ಸಂಸ್ಕೃತ ಅಥವಾ ಕನ್ನಡಕ್ಕೆ ಸಮೀಕರಿಸಿ ಕಾವ್ಯ ರಚಿಸಬೇಕು. ಹಾಗೆಂದು ದತ್ತಪದಿಯು ಏನೇನೋ ಶಬ್ದ ಕೊಡುವಂತಿಲ್ಲ. ಶಬ್ದಗಳಿಂದ ಕಾವ್ಯ ರಚಿಸುವಂತಿರಬೇಕು. ಅದಕ್ಕಾಗಿ ದತ್ತಪದಿಯೂ ಶಬ್ದಗಳನ್ನೊಳಗೊಂಡ ಕಾವ್ಯ ರಚಿಸಿಯೇ ತರಬೇಕು. ಆದರೆ ದತ್ತಪದಿಯು ರಚನೆಗೆ ಎಷ್ಟೋ ದಿನ ಉಪಯೋಗಿಸುತ್ತಾನೆ. ಆದರೆ ಅಷ್ಟಾವಧಾನಿಯು ಪೆನ್ನು ಪುಸ್ತಕ ಉಪಯೋಗಿಸದೇ ಕೇವಲ ಸ್ಮರಣಶಕ್ತಿಯಿಂದಲೇ, ಸ್ಥಳದಲ್ಲೇ ಕಾವ್ಯ ರಚಿಸಬೇಕು.
ಮೇಲೆ ದತ್ತಪದಿಯು ಕೊಟ್ಟ ಶಬ್ದಗಳು ಭೀಕರ ರೋಗಗಳ ಹೆಸರು. ಅದರಲ್ಲೂ ಎರಡು ಇಂಗ್ಲೀಷ್ ಶಬ್ದ. ಭೀಕರ ರೋಗಗಳಿಂದ ವರ್ಣನೆ ಮಾಡಬೇಕಾದುದು ಸುಂದರ ಸ್ತ್ರೀಯನ್ನು. ಎಂಥಹಾ ಕಠಿಣ ಸವಾಲು !!!
ಆದರೂ ಆರ್.ಗಣೇಶರು ಚೆನ್ನಾಗಿ, ಅರ್ಥವತ್ತಾಗಿ, ಛಂದೋಬದ್ಧವಾಗಿ ಕಾವ್ಯ ರಚಿಸಿದರು. ಅವರ ರಚನೆ ಹೀಗಿತ್ತು.
ಕ್ಷಯವಿಹೀನ ಚಂದ್ರತುಲ್ಯಾಸೆ ಲಘುಚಪಲ |
ನಯನೆ, ಕಾಲರಾತ್ರಿತುಲ್ಯವೇಣಿ ||
ನಯವಿಲಾಸ ಮಲ್ಲಿಕಾಮಾಲೆ ನುಳಿಯದನು |
ದಯಿತರ್ಗಳ ಮಲೇರಿ ಯಾಚಿಸಿರ್ಪರ್ ||
ಇದನ್ನು ಗಣೇಶರು ಹೇಳುತ್ತಿದ್ದಂತೆ ನಾನು ಬರೆದ ಕಾರಣ, ಛಂದೋದೋಷ, ಪದಪ್ರಯೋಗ ದೋಷ ಇದ್ದಲ್ಲಿ ನಾನು ಕೇಳಿ ಬರೆಯುವಲ್ಲಾದ ದೋಷವಿರಬಹುದೇ ಹೊರತು ಆರ್.ಗಣೇಶರ ರಚನೆಯಲ್ಲಾದ ದೋಷವಲ್ಲ. ಆರ್.ಗಣೇಶರ ರಚನೆಯನ್ನು ಅಲ್ಲಿದ್ದ ವಿದ್ವಾಂಸರು ಅನುಮೋದಿಸಿದ್ದರು.

           ನಾಲ್ಕೂ ಭೀಕರ ರೋಗಗಳನ್ನು ಸಂದರ್ಭೋಚಿತವಾಗಿ ಬಳಸಿ ಸುಂದರಿಯ ವರ್ಣನೆ ಮಾಡಿದ ಆರ್. ಗಣೇಶರಿಗೆ ಸಾವಿರ ನಮನಗಳು.


O :-   ಎಂಶಾಂತರಾಮ ಕುಡ್ವಮೂಡಬಿದಿರೆ
                 M.  Shantharama Kudva, Moodabidri

No comments:

Post a Comment