Tuesday 31 May 2016

ರಾಮದಾಸ ಸಾಮಗ

ಇಂದು ರಾಮದಾಸ ಸಾಮಗರ ಸಂಸ್ಮರಣಾ ಕಾರ್ಯಕ್ರಮ ಕೋಟೇಶ್ವರದಲ್ಲಿ ಅವರ ಸುಪುತ್ರರಾದ ವಾಸುದೇವ ಸಾಮಗರ ಮನೆಯಲ್ಲಿ ಜರಗಲಿದೆ. ರಾಮದಾಸ ಸಾಮಗರ ನೆನಪಿಗಾಗಿ ಲೇಖನ.

ದಿ. ಮಲ್ಪೆ ರಾಮದಾಸ ಸಾಮಗರು ದಿ. ಶಂಕರನಾರಾಯಣ ಸಾಮಗರ ತಮ್ಮ. ಇವರು ಹರಿದಾಸರಾಗಿ ಪ್ರಸಿದ್ಧರಾಗಿ ಮುಂದೆ ಯಕ್ಷರಂಗ ಪ್ರವೇಶಿಸಿ ಪ್ರಖ್ಯಾತ ಅರ್ಥಧಾರಿ, ವೇಷಧಾರಿಯಾದದ್ದು ಯಕ್ಷಗಾನಕ್ಕೆ ಒದಗಿಬಂದ ಭಾಗ್ಯ.

ಖಾದಿ ಅಂಗಿ, ಕಚ್ಚೆಯ ಧೋತಿ, ಹೆಗಲಲ್ಲಿ ಒಂದು ಶಾಲು, ಜುಟ್ಟು ಕಟ್ಟಿದ ಕೇಶರಾಶಿ ಇವರ ಪೋಷಾಕು. ಸದಾ ಹಸನ್ಮುಖಿಯಾಗಿದ್ದು ಸರಳ, ವಿನಯವಂತಿಕೆಯ ಸ್ವಭಾವದವರುಆದರೆ ಮಹಾ ಆತ್ಮಾಭಿಮಾನಿ. ತಮ್ಮ ಗೌರವಕ್ಕೆ ಧಕ್ಕೆ ಬಂದರೆ ಸಹಿಸುವವರಲ್ಲ. ದಿ. ಕಲ್ಲಾಡಿ ವಿಟ್ಠಲ ಶೆಟ್ಟರು ಇವರ ಘನತೆಗೆ ಚ್ಯುತಿ ಬಾರದಂತೆ ವ್ಯವಸ್ಥೆ ಮಾಡಿ ಕರ್ನಾಟಕ ಮೇಳದಲ್ಲೇ ಇವರು ಮೂವತ್ತು ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದರು.

ರಾ. ಸಾಮಗರು ರಾಮಾಯಣ, ಮಹಾಭಾರತ, ವೇದೋಪನಿಷತ್ತು, ಶಾಸ್ತ್ರ, ದಾಸ ಸಾಹಿತ್ಯದ ಮೇಲೆ ಅಪಾರ ಜ್ಞಾನ ಹೊಂದಿದ್ದರು. ಇವರ ಅರ್ಥಗಾರಿಕೆ ಆಕರ್ಷಕ. ವ್ಯಾಕರಣ ಒಲವು ಇದ್ದುದು ಸಾಮಗರ ಅರ್ಥದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ತುಳು ಪ್ರಸಂಗಗಳಲ್ಲಂತೂ ಸಾಮಗರು ಶುಧ್ಧ ತುಳು ಭಾಷಾ ಸೊಗಡಿನಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಇವರು ತಮ್ಮ ಅರ್ಥದಲ್ಲಿ ಪ್ರೇಕ್ಷಕರನ್ನು "ಇನ್ವಾಲ್ವ್" ಮಾಡುವ ಶೈಲಿ ಇವರಿಗೆ ಸೀಮಿತ.
"ನಾನು ಇದನ್ನು ಮಾಡಬಹುದೋ, ಮಾಡಬಾರದೋ?"
"ಗಂಡ ಶ್ರೇಷ್ಠನೋ ಹೆಂಡತಿಯೋ"
"ನನಗೆ ತಿಳಿಯದು"
ಮುಂತಾದವನ್ನು ಜಿಜ್ಞಾಸೆ ರೂಪದಲ್ಲಿ ಪ್ರೇಕ್ಷಕರನ್ನೂ ಕಥಾಭಾಗಕ್ಕೆ ತರುವುದು ಅವರ ಅರ್ಥಗಾರಿಕೆಯ ವಿಧಾನವಾಗಿತ್ತು. ಸರಸ, ಶೃಂಗಾರ ಸಂಭಾಷಣೆಯಲ್ಲಿ ಸಿದ್ಧ ಹಸ್ತರಾದ ಸಾಮಗರು ಕರುಣ ರಸ, ದುಃಖ ಸನ್ನಿವೇಶಗಳಲ್ಲಿ ತಾವೆ ಪಾತ್ರಗಳಲ್ಲಿ ತಲ್ಲೀನರಾಗಿ ಅಳುತ್ತಿದ್ದರಲ್ಲದೇ, ಸಭಿಕರನ್ನೂ ಅಳಿಸುವ ರೀತಿಯಲ್ಲಿ ಅಭಿನಯಿಸುತ್ತಿದ್ದರು. ಸಹಕಲಾವಿದರಿಗೆ ಹೇಳಿಕೊಡುವ ವಿಶೇಷ ಗುಣ ಸಾಮಗರಲ್ಲಿತ್ತು.

"ಮಾತುಗಾರರು" ಎಂಬ ಪದದ ಪರ್ಯಾಯ ಪದವೇ "ಸಾಮಗರು". ಮೊದಲೆಲ್ಲಾ ಹೊಸ ಮೇಳಗಳಾದಾಗ
"
ನಿಮ್ಮಲ್ಲಿ ಸ್ತ್ರೀ ಪಾತ್ರಕ್ಕೆ ಯಾರು?, ಪುಂಡುವೇಷಕ್ಕೆ ಯಾರು?" ಎಂದು ಕೇಳುವ ಹಾಗೆಯೇ "ನಿಮ್ಮಲ್ಲಿ ಸಾಮಗರು ಯಾರು?"
ಎಂದು ಕೇಳುವ ವಾಡಿಕೆ. ಅಂದರೆನಿಮ್ಮಲ್ಲಿ ಮಾತುಗಾರರು ಯಾರುಎಂದು ಇದರ ಅರ್ಥ.

ದೊಡ್ಡ ಸಾಮಗರು ಅರ್ಥಗಾರಿಕೆಯಿಂದ ನಿವೃತ್ತರಾದ ನಂತರ ಶೇಣಿಯವರಿಗೆ ಎದುರಾಳಿಯಾಗಿ ಬಂದವರು ರಾ.ಸಾಮಗ, ಕುಂಬ್ಳೆ, ತೆಕ್ಕಟ್ಟೆ, ಮೂಡಂಬೈಲು, ಜೋಷಿ ಮುಂತಾದವರು. 

ರಾ.ಸಾಮಗ - ಶೇಣಿ ಜೋಡಿಯಿಂದಾಗಿ ಅರ್ಥಗಾರಿಕೆ ವಿಸ್ತೃತರೂಪ ತಳೆಯಿತು. ಶೇಣಿ ಸಾಮಗರ ಜೋಡಿ ಕಾಲದಲ್ಲಿ "ಶೇಣಿ - ಸಾಮಗ ವೈಭವ" ಎಂದೇ ಪ್ರಸಿದ್ಧಿಯಾಗಿತ್ತು. 
ರಾಮ-ರಾವಣ, ಬಲಿ- ಶುಕ್ರ, ವಾಲಿ-ರಾಮ ಮುಂತಾದ ಪಾತ್ರಗಳು ಜನಪ್ರಿಯತೆ ಪಡೆದವು.
"
ಶೇಣಿ - ಸಾಮಗ ವೈಭವ" ಎಂದೇ ಜೋಡಿ ಸುಪ್ರಸಿದ್ಧವಾಗಿತ್ತು .

ಸಾಮಗರ ಹರಿಶ್ಚಂದ್ರ ಪಾತ್ರ ಸುಪ್ರಸಿದ್ಧವಾದುದು. ಒಮ್ಮೆ ನಕ್ಷತ್ರಿಕ ಪಾತ್ರಧಾರಿಯು ಸಾಮಗರ ಹರಿಶ್ಚಂದ್ರನಿಗೆ ಹೊಡೆಯುವ ಸನ್ನಿವೇಶಕ್ಕೆ ಸಾಮಗರು ಹಿರಿಯರೆಂಬ ಕಾರಣಕ್ಕೆ ಹೊಡೆಯದಿದ್ದಾಗ, ಸಾಮಗರು ಆತನನ್ನು ಕರೆದು
"ನೀನು ನನಗೆ ಹೊಡೆಯಬೇಕು. ರಂಗದಲ್ಲಿ ನಾನು ಸಾಮಗನಲ್ಲಾ, ಹರಿಶ್ಚಂದ್ರ . ನೀನು ಹೊಡೆಯದಿದ್ದರೆ ನಾನ್ಹೇಗೆ ಅಭಿನಯಿಸುವುದು? "
ಎಂದು ಹೇಳಿ ರಂಗಪ್ರಜ್ಞೆ ಮೆರೆದಿದ್ದರು .

ನಳನ ಪಾತ್ರ ಮಾಡಿ, ಶನಿಪೀಡಿತನಾದ ನಳನ ಚಿತ್ರಣವನ್ನು ಅರ್ಥಪೂರ್ಣವಾಗಿ ಬಿಂಬಿಸಿದ್ದರು. ಶ್ರೀಕೃಷ್ಣ, ಶ್ರೀರಾಮ, ರುಕ್ಮಾಂಗದ, ಮಾಧವಭಟ್ಟ, ಮಯೂರಧ್ವಜ, ಅತಿಕಾಯ ಮುಂತಾದ ಪಾತ್ರಗಳು ಸಾಮಗರ "ಮಾಸ್ಟರ್ ಪೀಸ್" ಆಗಿತ್ತು. ಚಿಕ್ಕ ಚಿಕ್ಕ ವಾಕ್ಯಗಳನ್ನು ಚೊಕ್ಕವಾಗಿ ಪ್ರಸ್ತುತ ಪಡಿಸುತ್ತಿದ್ದರು. ಅತ್ಯುತ್ತಮ ಪ್ರತ್ಯುತ್ಪನ್ನಮತಿಯಾಗಿದ್ದು, ಎದುರಾಳಿಯ ಪ್ರಶ್ನೆಗೆ ತಟ್ಟನೇ ಉತ್ತರಿಸುವುದು ಸಾಮಗರ ಶೈಲಿ.
"ಚಂದ್ರಾವಳಿ ವಿಲಾಸ" ಶ್ರೀಕೃಷ್ಣನಿಗೆಪುಂಡರೀಕಾಕ್ಷ ಉಪಾಧ್ಯಾಯರು
"
ಇನ್ನೂ ಮೀಸೆ ಬಂದಿಲ್ಲಾ, ಪ್ರಣಯ ಅಪೇಕ್ಷಿಸುತ್ತಿ"
ಎಂದಾಗ ಸಾಮಗರು,
"
ಪ್ರಣಯಕ್ಕೆ ಬೇಕಾದುದು ಮೀಸೆಯಲ್ಲ, ಆಸೆ" ಎಂದು ಪ್ರೇಕ್ಷಕರನ್ನು ರಂಜಿಸಿದ್ದರು.

ಕೊಳ್ಯೂರು ರಾಮಚಂದ್ರ ರಾವ್ - ಸಾಮಗರ ಜೋಡಿ ಅತ್ಯಂತ ಪ್ರಸಿಧ್ಧವಾಗಿತ್ತು.
"
ಯಕ್ಷಗಾನದ ದಂಪತಿ " ಎಂದೇ ಜನಪ್ರಿಯವಾಗಿತ್ತು. ಸಾವಿರಾರು ಆಟಗಳಲ್ಲಿ ಜೋಡಿ ಪ್ರೇಕ್ಷಕರನ್ನು ರಂಜಿಸಿತ್ತು. 

ಸಾಮಗರ "ಸಹಸ್ರಚಂದ್ರ ದರ್ಶನ" ಕಾರ್ಯಕ್ರಮದಂದು ಸಾಮಗ - ಕೊಳ್ಯೂರು ಒಟ್ಟಿಗೇ ನಿಂತು ಫೋಟೋ ತೆಗೆದಾಗ ಅಂದು ಬಂದಿದ್ದವರೆಲ್ಲಾ (ನಾನು ಸಹಿತ) ಚಪ್ಪಾಳೆ ತಟ್ಟಿ ಹರ್ಷೋಧ್ಗಾರ ಮಾಡಿದ್ದರು. "ಸಾಮಗ - ಕೊಳ್ಯೂರು - ಮಿಜಾರು" ಎಂಬ ತ್ರಿಮೂರ್ತಿಗಳಿಂದ ಕರ್ಣಾಟಕ ಮೇಳ ಉತ್ತುಂಗ ಶಿಖರವನ್ನೇರಿತ್ತು.

ಇಂಥಹಾ ಮಹಾಚೇತನಕ್ಕೆ ನಮನ ಸಲ್ಲಿಸುತ್ತೇನೆ.

O :-   ಎಂಶಾಂತರಾಮ ಕುಡ್ವಮೂಡಬಿದಿರೆ
                 M.  Shantharama Kudva, Moodabidri

No comments:

Post a Comment