Tuesday 31 May 2016

ಭಾಗವತ ಶ್ರೇಷ್ಠ ಕಾಳಿಂಗ ನಾವಡರು

ಅದು ಸುಮಾರು 1982ನೆಯ ಕಾಲ. ಸಾಲಿಗ್ರಾಮ ಮೇಳದವರಿಂದ ಮೂಡಬಿದಿರೆಯಲ್ಲಿ "ನಾಗಶ್ರೀ" ಪ್ರಸಂಗದ ಪ್ರದರ್ಶನವಿತ್ತು.
"ಕಾಳಿಂಗ ನಾವಡರ ಹಾಡುಗಾರಿಕೆ ಕೇಳಲು ಮರೆಯದಿರಿ"
ಎಂಬ ವಿಶೇಷ ಆಕರ್ಷಣೆ ಕರಪತ್ರದಲ್ಲಿತ್ತು. ನಾವಡರನ್ನು ನಾನು ಆವರೆಗೆ ನೋಡಿರಲಿಲ್ಲ. ಕಾಲದಲ್ಲಿ ನಾವಡರ ಪದ್ಯ ಎಂದರೆ ಎಲ್ಲರಲ್ಲೂ ಸಂಚಲನ ಮೂಡಿಸಿದ ಸಮಯ. ನಾನೂ ಯಕ್ಷಗಾನಕ್ಕೆ ಹೋದೆ. ನಾವಡರು ಸುಮಾರು 1.30ಕ್ಕೆ ಭಾಗವತಿಕೆಗೆ ಕುಳಿತುಕೊಳ್ಳುತ್ತಾರೆ ಎಂದು ನನಗೆ ತಿಳಿದಿತ್ತು. ಸುಮಾರು 2.00 ಘಂಟೆಗೆ ಒಬ್ಬರು ಯುವಕ ಭಾಗವತಿಕೆಗೆ ಕುಳಿತರು. ಒಳ್ಳೇ ಕಂಠದೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಿದರು. ನಾವಡರ ಸುಪ್ರಸಿದ್ಧ ಹಾಡಾದ,
"ನೀಲಗಗನದೊಳು ಮೇಘಗಳು"
ಪದ್ಯವನ್ನೂ ಅವರೇ ಹಾಡಿದರು. ಅತ್ಯಂತ ಸುಂದರವಾಗಿ ಹಾಡಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ಪದ್ಯವನ್ನು ನಾವಡರೇ ಹಾಡುವರೆಂದು ನಾನು ನಿರೀಕ್ಷಿಸಿದ್ದೆ. ಬಹುಷಃ ಇವತ್ತು ನಾವಡರು ರಜೆಯಲ್ಲಿರಬೇಕೆಂದು ಎಣಿಸಿ ನೇರ ಚೌಕಿಗೆ ಹೋದೆ. ಅಲ್ಲೇ ಇದ್ದ ಕಲಾವಿದರಲ್ಲಿ
"ಇವತ್ತು ನಾವಡರು ರಜೆಯಲ್ಲಿದ್ದಾರಾ?"
ಎಂದು ಪ್ರಶ್ನಿಸಿದಾಗ ಕಲಾವಿದರು, (ಅವರು ಬಳ್ಕೂರು ಎಂದು ಮತ್ತೆ ತಿಳಿಯಿತು),
"ಈಗ ಭಾಗವತಿಕೆ ಮಾಡುತ್ತಿರುವವರು ಕಾಳಿಂಗ ನಾವಡರಲ್ಲವೇ" ಎಂದರು.
ನನಗೆ ಅತ್ಯಂತ ಆಶ್ಚರ್ಯವಾಯಿತು. ಏಕೆಂದರೆ ನಾನು ಅಷ್ಟರವರೆಗೆ ತಿಳಿದದ್ದು ನಾವಡರೆಂದರೆ ಮಧ್ಯವಯಸ್ಕರಿರಬಹುದೆಂದು. ಏಕೆಂದರೆ ಅವರು ಗಳಿಸಿದ ಹೆಸರು, ಕೀರ್ತಿ, ಪ್ರಸಿದ್ಧಿ ಅಷ್ಟು ಉನ್ನತ ಸ್ಥಾನದಲ್ಲಿತ್ತು. ಸುಮಾರು 23 ವರ್ಷದ ತರುಣರೋರ್ವ ಇಂಥಹ ಉನ್ನತ ಮಟ್ಟಕ್ಕೆ ಏರುವ ಸಂಭವನೀಯತೆ ನನ್ನ ನಿರೀಕ್ಷೆಗೂ ಮೀರಿದ ವಿಚಾರವಾಗಿತ್ತು. ಬಹುಷಃ ಯಕ್ಷರಂಗ ಮಾತ್ರವಲ್ಲ, ಯಾವುದೇ ಕ್ಷೇತ್ರದಲ್ಲೂ ಇಂಥಹ ಸಣ್ಣ ಪ್ರಾಯದಲ್ಲೇ ಅಭೂತಪೂರ್ವ ಸಾಧನೆ ಮಾಡಿದವರು ಕೇವಲ ಬೆರಳೆಣಿಕೆಯವರು ಮಾತ್ರ.
ಕಾಳಿಂಗ ನಾವಡರು 06.06.1957ರಲ್ಲಿ ಜನಿಸಿದರು. ಇವರ ತಂದೆಯವರಾದ ಗುಂಡ್ಮಿ ರಾಮಚಂದ್ರ ನಾವಡರೂ ಬಡಗುತಿಟ್ಟಿನ ಪ್ರಸಿದ್ಧ ಭಾಗವತರಾದ ಕಾರಣ ಕಾಳಿಂಗ ನಾವಡರಲ್ಲೂ ಭಾಗವತಿಕೆಯ ರಕ್ತ  ಹರಿದು ಬಂದಿತ್ತು. ತಂದೆಯವರಲ್ಲಿ ಭಾಗವತಿಕೆಯ ಪ್ರಾಥಮಿಕ ಪಟ್ಟುಗಳನ್ನು ಕಲಿತು, ಮುಂದೆ ಬಡಗಿನ ಸುಪ್ರಸಿದ್ಧ ಭಾಗವತರಾದ ನಾರ್ಣಪ್ಪ ಉಪ್ಪೂರರಲ್ಲಿ ಶಿಷ್ಯತ್ವ ಸ್ವೀಕರಿಸಿ, ಭಾಗವತಿಕೆಯ ಸಂಪೂರ್ಣ ಸಾರವನ್ನು ತಿಳಿದುಕೊಂಡರು. ಬಯಲಾಟ ಮೇಳದಲ್ಲಿ ತಿರುಗಾಟ ನಡೆಸಿ ಮುಂದೆ ಸಾಲಿಗ್ರಾಮ ಮೇಳ ಸೇರಿದರು. ಸಾಲಿಗ್ರಾಮ ಮೇಳದ ತಿರುಗಾಟ ನಾವಡರ ಅದ್ಭುತ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಯಿತು. ದೈವದತ್ತವಾಗಿ ಒದಗಿಬಂದ ಶಾರೀರದಿಂದಾಗಿ "ಕಂಚಿನ ಕಂಠದ ಭಾಗವತ"ರೆಂದು ಪ್ರಸಿದ್ಧಿ ಹೊಂದಿದರೆ, ಪ್ರಸಂಗಗಳ ಮೇಲೆ ಹೊಂದಿರುವ ಹಿಡಿತದಿಂದಾಗಿ "ರಂಗ ನಿರ್ದೇಶಕ"ರೆಂದು ಕರೆಯಲ್ಪಟ್ಟರು. ಸಾಹಿತ್ಯದ ಮೇಲಿರುವ ಪ್ರಬುದ್ಧತೆಯಿಂದಾಗಿ ನಾಗಶ್ರೀ, ಕಾಂಚನಶ್ರೀ, ವಿಜಯಶ್ರೀಯಂಥಹ ಯಶಸ್ವೀ ಉತ್ತಮ ಮೌಲ್ಯಾಧಾರಿತ ಪ್ರಸಂಗಗಳನ್ನು ರಚಿಸಿ "ಉತ್ತಮ ಪ್ರಸಂಗಕರ್ತರು" ಎನಿಸಿಕೊಂಡರು. ಅದರಲ್ಲೂ ನಾವಡರೇ ರಚಿಸಿ ನಿರ್ದೇಶಿಸಿದ ಕಲಾಕುಸುಮ "ನಾಗಶ್ರೀ" ಯಕ್ಷರಂಗದಲ್ಲೇ ಹೊಸ ಕ್ರಾಂತಿಯನ್ನೇ ಹಬ್ಬಿಸಿತು. "ನಾಗಶ್ರೀ" ಪ್ರಸಂಗ ನೋಡಿದ್ದೇನೆಂದರೆ, ಕಾಲದಲ್ಲಿ, ಅದೊಂದು ಪ್ರತಿಷ್ಠೆಯ ವಿಷಯವಾಗಿತ್ತು ಎಂಬುದು ಸತ್ಯದ ವಿಚಾರವಾಗಿತ್ತು. ಉತ್ತಮ ಕಥಾಹಂದರ, ನಾವಡರ ಯೋಗ್ಯ ನಿರ್ದೇಶನದೊಂದಿಗೆ ಭಾವಪೂರ್ಣವಾದ ಭಾಗವತಿಕೆ ಪ್ರಸಂಗದ ಜೀವಾಳವಾಗಿತ್ತು.
ನಾವಡರ ಕಂಠಶ್ರೀಯಲ್ಲಿ ಹೊರಹೊಮ್ಮಿದ
"ನೀಲಗಗನದೊಳು ಮೇಘಗಳು"
ಪದ್ಯವಂತೂ ಜನರಲ್ಲಿ ಹುಚ್ಚೆಬ್ಬಿಸಿತು. ಯಾವುದೇ ಹೋಟೇಲ್, ಅಂಗಡಿ, ಬಸ್, ಕಾರ್, ವಿವಿಧ ಸಭಾ ಕಾರ್ಯಕ್ರಮಗಳಲ್ಲಿ ಹಾಡು ರಾರಾಜಿಸಲಾರಂಭಿಸಿತ್ತು. ಇವತ್ತಿಗೂ ಹಾಡು ಹಿಂದಿನಷ್ಟೇ ಜನಪ್ರಿಯತೆ ಗಳಿಸಿದೆ ಎಂದರೆ ನಾವಡರು ಪ್ರೇಕ್ಷಕರಿಗೆ ಅದೆಷ್ಟು  ಪ್ರೀತರಾಗಿದ್ದರು ಎಂದು ಊಹಿಸಬಹುದು.
"ನಾಗಶ್ರೀ" ಪ್ರಸಂಗದಲ್ಲಿ ನಾವಡರು ಹಾಡಿದ ಎಲ್ಲಾ ಹಾಡುಗಳೂ ಪ್ರೇಕ್ಷಕರೆಲ್ಲರಿಗೂ ಕಂಠಪಾಠವಾಗಿತ್ತು, ಎಂದರೆ, ನಾವಡರ ಭಾಗವತಿಕೆ ಯಾವ ಮಟ್ಟದಲ್ಲಿತ್ತು ಎಂದು ಅರ್ಥೈಸಬಹುದು.
ಯಕ್ಷಗಾನ ಕಲಾವಿದರೋರ್ವರು ಕಾರ್ಯಕ್ರಮಕ್ಕಾಗಿ ವಿಮಾನ ಹತ್ತಿದವರಲ್ಲಿ ನಾವಡರು ಮೊದಲಿಗರು. ತಮ್ಮ ಜನಪ್ರಿಯತೆಯನ್ನು ದೂರದ ಮುಂಬೈಗೂ ಪಸರಿಸಿದ ಕಾರಣ ನಾವಡರನ್ನು ಕಾಲದಲ್ಲಿ ಸಂಘಟಕರು ಮುಂಬೈಗೆ ವಿಮಾನದಲ್ಲೇ ಕರೆಸಿಕೊಂಡಿದ್ದರು.
"ವಿಮಾನ ಭಾಗವತರು" ಎಂದೇ ಕಾಲದಲ್ಲಿ ಪ್ರಸಿದ್ಧರಾಗಿದ್ದರು. ಯಕ್ಷಗಾನಕ್ಕೂ ತಾರಾಮೌಲ್ಯ ಬಂದದ್ದು ನಾವಡರಿಂದಾಗಿ. ನಾವಡರಿದ್ದರೆ "ಗೇಟ್ ಕಲೆಕ್ಷನ್ ದುಪ್ಪಟ್ಟು" ಎಂಬುದು ಕಾಲದಲ್ಲಿಜನಪ್ರಿಯ ಗಾದೆ’ಯಾಗಿತ್ತು. ಇಷ್ಟೆಲ್ಲಾ ಜನಪ್ರಿಯರಾಗಿದ್ದರೂ ನಾವಡರು ಸರಳ, ನಿಗರ್ವಿ, ಸಜ್ಜನ ಹಾಗೂ ಸ್ನೇಹಶೀಲ ವ್ಯಕ್ತಿಯಾಗಿದ್ದರು. ಪೂರ್ವರಂಗದ ಪಾತ್ರ ಮಾಡುವ ಕಲಾವಿದರಲ್ಲೂ ಸೌಜನ್ಯದಿಂದ ವರ್ತಿಸುತ್ತಿದ್ದರು.
ಇಂದಿನ ಸುಪ್ರಸಿದ್ಧ ಕಲಾವಿದರಾದ ಬಳ್ಕೂರು, ಕೊಂಡದಕುಳಿ, ಗೋಪಾಲಾಚಾರಿ, ರಾಜೀವ ಶೆಟ್ಟಿ, ದಯಾನಂದ ನಾಗೂರು ಮುಂತಾದವರು ನಾವಡರ ಗಾಢವಾದ ಪ್ರಭಾವಕ್ಕೊಳಗಾದವರು. ನಾಗಶ್ರೀಯಲ್ಲಿ ಶುಭ್ರಾಂಗನಾಗಿ ಶಿರಿಯಾರ ಮಂಜು ನಾಯ್ಕ, ವಾಸುದೇವ ಸಾಮಗರು, ಸುದರ್ಶನನಾಗಿ ಜಲವಳ್ಳಿ, ಶಿಥಿಲನಾಗಿ ಬಳ್ಕೂರು, ಕೊಂಡದಕುಳಿ, ದಾರಿಕೆಯಾಗಿ ರಾಮನಾಯಿರಿ, ಕೈರವನಾಗಿ ಮುಖ್ಯಪ್ರಾಣ, ಶೈಥಿಲ್ಯನಾಗಿ ಗೋಪಾಲಾಚಾರಿ, ನಾಗಶ್ರೀಯಾಗಿ ದಯಾನಂದ ನಾಗೂರು, ರಾಜೀವ ಶೆಟ್ಟರು ಅಪಾರವಾಗಿ ಮಿಂಚಿದ್ದರು.
ಪೌರಾಣಿಕ ಪ್ರಸಂಗಗಳಲ್ಲೂ ನಾವಡರು ಬೇಡಿಕೆಯ ಭಾಗವತರಾಗಿದ್ದರು.  
"ಗದಾಯುದ್ಧ" ಪ್ರಸಂಗದ
"ಕುರುರಾಯ ಇದನೆಲ್ಲ ಕಂಡು", "ಪೊಡವಿಪಾಲಕ", "ಆದಡೆಲೆ ಸಂಜಯ", "ನಿನ್ನಯ ಬಲುಹೇನು", "ಕೇಳು ಧರ್ಮಜ", "ಕಪಟನಾಟಕ ರಂಗ", "ಭರದಿಂ", "ಎಲಾ ಎಲಾ ಛೀ" ಮುಂತಾದ ಹಾಡುಗಳನ್ನು ನಾವಡರ ಕಂಠದಿಂದಲೇ ಕೇಳಬೇಕೆನಿಸುವಂತೆ ತಮ್ಮ ಛಾಪನ್ನು ಮೂಡಿಸಿದ್ದರು. ಬಡಗುತಿಟ್ಟಿನಲ್ಲಿ ಪ್ರಚಲಿತದಲ್ಲಿ ಇಲ್ಲದ ಅಪೂರ್ವ ರಾಗಗಳನ್ನು ಬಳಸಿದ ಕೀರ್ತಿ ಕಾಳಿಂಗ ನಾವಡರಿಗೇ ಸಲ್ಲಬೇಕು. ನಾವಡರು ತಮ್ಮ ಹಾಡಿಗೆ ಮದ್ದಲೆ, ಚೆಂಡೆವಾದಕರನ್ನೂ ಚೆನ್ನಾಗಿ "ದುಡಿಸುತ್ತಿದ್ದರು". ಹಿಮ್ಮೇಳದ ಸಮರ್ಥ ಹಾಗೂ ಸಮನ್ವಯದ ಬಳಕೆಯಲ್ಲಿ ನಾವಡರಿಗೆ ಅತೀವವಾದ ಆಸಕ್ತಿ ಇತ್ತು.
ತಮ್ಮ 20ನೇ ವಯಸ್ಸಲ್ಲೇ ಯಕ್ಷರಂಗ ಪ್ರವೇಶಿಸಿ, ಸಣ್ಣ ವಯಸ್ಸಲ್ಲೇ  ಊಹನಾತೀತ ಸಾಧನೆಯಿಂದ ಕ್ರಾಂತಿ ಎಬ್ಬಿಸಿದ ಕಾಳಿಂಗ ನಾವಡರ "ಜೀವನ ಯಾತ್ರೆ" ಅಲ್ಪಕಾಲದಲ್ಲೇ ಮುಕ್ತಾಯವಾದುದು ಐತಿಹಾಸಿಕ  ದುರಂತಗಳಲ್ಲೊಂದು. 26 ವರ್ಷಗಳ  ಹಿಂದಿನ "27.05.1990" ದಿನಾಂಕ ಯಕ್ಷರಂಗಕ್ಕೆ ಬರಸಿಡಿಲು ಬಡಿದ ವರ್ಷ. ಹಿಂದಿನ ರಾತ್ರಿ ಸಾಗರದಲ್ಲಿ ಯಕ್ಷಗಾನ ಪ್ರದರ್ಶನ ಮುಗಿಸಿ, ಉಡುಪಿಯ ಟೂರಿಸ್ಟ್ ಹೋಟೇಲಲ್ಲಿ ಸ್ನೇಹಿತರೊಂದಿಗೆ ಕುಶಲೋಪರಿ ಮಾತಾಡಿ,  11.00 ಘಂಟೆಗೆ ಸ್ನೇಹಿತರೊಬ್ಬರ ಮದುವೆಗೆ ಬರುತ್ತೇನೆಂದು ಹೇಳಿ, 8.30ಕ್ಕೆ  ಬೈಕ್ ಏರಿದವರು, ಅರ್ಧ ಘಂಟೆಯಲ್ಲೆ, ಅಪಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದುದು ಯಕ್ಷರಂಗಕ್ಕಾದ ಅತೀವ ಹಿನ್ನಡೆ. ನಾವಡರ ಆಪ್ತಸ್ನೇಹಿತರಾದ ಗಣಪತಿ ಪೈಗಳೂ ಬೈಕ್ ಏರಿದವರು, ನಾವಡರ ಇಸ್ತ್ರಿಗೆ  ಕೊಟ್ಟ ವಸ್ತ್ರಗಳನ್ನು  ತರಲೆಂದು ಕೆಳಗೆ ಇಳಿದಿದ್ದರು.
( ಗಣಪತಿ ಪೈಗಳು ಸಣ್ಣ ಹೋಟೇಲ್ ನಡೆಸುತ್ತಿದ್ದು, ಮಿತ್ರವಲಯದಲ್ಲಿ "ಗಂಪು" ಎಂದು ಪರಿಚಿತರು. ಇವರು ನಾವಡರ ಆಪ್ತರಾಗಿದ್ದರು. ಇವರು ನನಗೂ ಮಿತ್ರರಾಗಿದ್ದಾರೆ. ಇವರ ಫೇಸ್ ಬುಕ್ ನಲ್ಲಿ ಅಂದಿನಿಂದ ಇಂದಿನವರೆಗೂ ನಾವಡರ ಫೋಟೋವೇ ಇರುವುದನ್ನು ನೋಡಬಹುದು) ಸಾಯುವ ವಯಸ್ಸಲ್ಲದ, ಸಾಯಬಾರದ ವಯಸ್ಸಾದ ಕೇವಲ ತಮ್ಮ 33ರಲ್ಲೇ "ಗಾನಕೋಗಿಲೆ" ಅಸ್ತಂಗತರಾದುದು ವಿಷಾದನೀಯ. ಕಾಳಿಂಗ ನಾವಡರು ಇಂದು ನಮ್ಮೊಡನಿರದಿದ್ದರೂ, ಅವರ ಸಾಧನೆ, ಅವರ ಹಾಡುಗಳು ಇಂದೂ ಯಕ್ಷಪ್ರೇಮಿಗಳ ಮನಸ್ಸಲ್ಲಿ ಚಿರಸ್ತಾಯಿಯಾಗಿ ಉಳಿದಿದೆ.

ಭಾಗವತ ಶ್ರೇಷ್ಠರಾದ ಕಾಳಿಂಗ ನಾವಡರಿಗೆ ಸಹಸ್ರ ಸಹಸ್ರ ನಮನಗಳು.

      O :-   ಎಂಶಾಂತರಾಮ ಕುಡ್ವಮೂಡಬಿದಿರೆ
                        M.  Shantharama Kudva, Moodabidri

No comments:

Post a Comment