Thursday 9 July 2015

ಹಿಂದಿನ ಕಾಲದ ಟೆಂಟ್ ಮೇಳದ ಸ್ವಾರಸ್ಯಗಳು

ಒಂದು ಕಾಲದಲ್ಲಿ ೧೩ಕ್ಕೂ ಹೆಚ್ಚು ಟೆಂಟ್ ಮೇಳಗಳಿದ್ದವು. ಮೇಳ ನಡೆಸುವುದು ಆರ್ಥಿಕವಾಗಿ ಲಾಭದಾಯಕವಲ್ಲದ ಕಾರಣ ಒಂದೊಂದೇ ಮೇಳಗಳು ನೇಪಥ್ಯಕ್ಕೆ ಸರಿಯುವಂತಾಯಿತು. ಈಗ ಸಾಲಿಗ್ರಾಮ, ಪೆರ್ಡೂರು ಎರಡು ಟೆಂಟ್ ಮೇಳಗಳು ಮಾತ್ರ ಉಳಿದಿದೆ. ಒಂದು ಕಾಲದಲ್ಲಿ ಕರ್ನಾಟಕ, ಸುರತ್ಕಲ್ ಮುಂತಾದ ಮೇಳಗಳ ಪ್ರದರ್ಶನದ ಕಾಂಟ್ರಾಕ್ಟ್ ಸಿಗಬೇಕಾದರೆ ವಸೂಲಿಬಾಜಿ ಮಾಡಿಸಬೇಕಾಗಿತ್ತು. ಅಷ್ಟು ಬೇಡಿಕೆಯಿತ್ತು.
ಟೆಂಟ್ ಆಟ ನೋಡುವುದೇ ಒಂದು ಗಮ್ಮತ್ತು. ಮರದ ಈಸೀಚೇರ್ ನಲ್ಲಿ ಕಡ್ಲೆಚರುಮುರಿ ತಿನ್ನುತ್ತಾ ಆಟ ನೋಡುವುದರಲ್ಲಿ ಇರುವ ಆನಂದ ಈಗಿನ ಪ್ಲಾಸ್ಟಿಕ್ ಖುರ್ಚಿಯಲ್ಲಿ ಸಿಗುವುದಿಲ್ಲಪ್ರತೀ ವರ್ಷ ಕಲಾವಿದರು ಒಂದು ಮೇಳದಿಂದ ಇನ್ನೊಂದು ಮೇಳಕ್ಕೆ "ಹಾರು"ವಲ್ಲೂ ಪ್ರೇಕ್ಷಕರ ಆಸಕ್ತಿಯಿತ್ತು.
ಕದ್ರಿ ಮೇಳ ಕರ್ನೂರು ಕೊರಗಪ್ಪ ರೈ ಗಳ ಸಂಚಾಲಕತ್ವದಲ್ಲಿ ಪುನಃ ತಿರುಗಾಟ ನಡೆಸಿದ ವರ್ಷ. ಬಹುಷಃ  "ಸತ್ಯದಪ್ಪೆ ಚೆನ್ನಮ್ಮ" ಪ್ರಸಂಗ
ಕ್ರಿಶ್ಚನ್ ಬಾಬು, ದಾಸಪ್ಪ ರೈ, ಮನೋಹರ ಕುಮಾರ್  ಕಾವೂರು ಕೇಶವ, ವರ್ಕಾಡಿ, ಮಾಧವ ಶೆಟ್ಟಿ ಮುಂತಾದ ಘಟಾನುಘಟಿಗಳಿಂದ ಕೂಡಿದ ಮೇಳ.
ಪ್ರಸಂಗದಲ್ಲಿ ದಾಸಪ್ಪ ರೈಗಳ ಪಾತ್ರ ಪ್ರಸಂಗದ ಕೊನೆಯಲ್ಲಿ ಮತಿವಿಕಲನಾಗುವ ಸನ್ನಿವೇಶ. ದಾಸಪ್ಪ ರೈಗಳು ಹುಚ್ಚನಾಗಿ ಅಭಿನಯ ನೀಡುತ್ತಿದ್ದರು. ಅಷ್ಟರಲ್ಲೇ, ಸಭೆಯಲ್ಲೂ ಒಬ್ಬ ಹುಚ್ಚ ಬಂದಿದ್ದ. ರೈಗಳ ಪಾತ್ರ ನೋಡಿದ ಹುಚ್ಚನಿಗೆ ಏನೆನಿಸಿತೋ? ಆತನೂ ವೇದಿಕೆ ಏರಬೇಕೇ? ಸಭೆಯೆಲ್ಲಾ ಘೊಳ್ಳೆಂದಿತು. ಕೊನೆಗೆ ಸಂಘಟಕರು ನಿಜ ಹುಚ್ಚನನ್ನು ವೇದಿಕೆಯಿಂದ ಶತಪ್ರಯತ್ನದಿಂದ ಕಳಿಸಬೇಕಾಯಿತು.
ಇಂಥಹದೇ ಇನ್ನೊಂದು ಸಂಧರ್ಭ. 
ಮದವೂರು ಮೇಳದವರಿಂದ ಕಾರ್ಕಳದಲ್ಲಿ "ಕಾರ್ನಿಕದ ಕಲ್ಲುರ್ಟಿ" ತುಳು ಪ್ರಸಂಗ
ನಾನೂ ಹೋಗಿದ್ದೆ. ಅದರಲ್ಲೂ ಪ್ರಸಂಗದ ಕೊನೆಯಲ್ಲಿ ತುಳುವಿನ "ಚಾರ್ಲಿ ಚಾಪ್ಲೀನ್" ನಾಮಾಂಕಿತ ಸೀತಾರಾಮ ಕುಮಾರರ ಪಾತ್ರ ಹುಚ್ಚನಾಗಿ ಬರುವ ಸನ್ನಿವೇಶ. ಸೀತಾರಾಮ್ ಹೊಸತನ ಹುಡುಕುವ ಸೃಜನಶೀಲ ಹಾಸ್ಯಗಾರ ಎಂಬುದು ನಿಮಗೆಲ್ಲಾ ತಿಳಿದ ವಿಚಾರವೇ. ಕಾರ್ಕಳದಲ್ಲಿ ಸೀತಾರಾಮರು "ಹೊಸ ಹಾಸ್ಯ"ಕ್ಕೆ ಮನ ಮಾಡಿದರು.
 ಕಾರ್ಕಳದಲ್ಲಿ ಒಬ್ಬ ಹುಚ್ಚನಿದ್ದ. ಅವನು ಯಾರಿಗೂ ಉಪದ್ರವ ಕೊಡುತ್ತಿರಲಿಲ್ಲ. ಆದರೆ ಇಡೀ ದಿನ "ಓಂ ಓಂ ಓಂ" ಎಂದು ಹೇಳುತ್ತಿದ್ದ. ಸೀತಾರಾಮರೂ ಹುಚ್ಚನ ಪಾತ್ರದಲ್ಲಿ "ಓಂ ಓಂ ಓಂ" ಎಂದರು. ಅಷ್ಟರಲ್ಲಿ ಎಲ್ಲಿದ್ದನೋ  "ಓಂ" ಹುಚ್ಚವೇದಿಕೆಯ ಎದುರು ಪ್ರತ್ಯಕ್ಷನಾಗಿ "ಓಂ ಓಂ ಓಂ" ಎನ್ನಬೇಕೇ?
ಸಭಿಕರಿಗೊಂದು ಪುಕ್ಕಟೆ ರಂಜನೆ.

ಸಾಲಿಗ್ರಾಮ ಮೇಳದವರಿಂದ ಮೂಡಬಿದಿರೆಯಲ್ಲಿ "ಉತ್ತರನ ಪೌರುಷ" ಆಟವಾಸಾಮಗರ ಉತ್ತರಕೊಂಡದಕುಳಿಯವರ ಬ್ರಹನ್ನಳೆಸಾಮಗರ ಉತ್ತರ ಬಹಳ ಪ್ರಸಿಧ್ಧ ಪಾತ್ರಗಳಲ್ಲೊಂದು.
ಬ್ರಹನ್ನಳೆಯು, ಉತ್ತರನು ಮರ ಹತ್ತಿ ಪಾಂಡವರ ಆಯುಧ ಕೆಳಗಿಳಿಸಲು ಒಪ್ಪದಿದ್ದಾಗ, ಖಡ್ಗ ತೋರಿಸಿ ಉತ್ತರನನ್ನು ಬೆದರಿಸುವ ಸಂಧರ್ಭಕೊಂಡದಕುಳಿಯವರು ಖಡ್ಗವನ್ನು ಸಾಮಗರ ಕುತ್ತಿಗೆಗೆ ಹಿಡಿದರು. ಖಡ್ಗ ಬಹುಷಃ ಸ್ವಲ್ಪ ತುಕ್ಕು ಹಿಡಿದಿರಬೇಕು.
ಸಾಮಗರು ಕೂಡಲೇ
"ಸ್ವಲ್ಪ ದೂರ ಹಿಡಿ ಮಹರಾಯನಿನ್ನ ಖಡ್ಗಕ್ಕೆ ತುಕ್ಕು ಹಿಡಿದಿದೆ. ತಾಗಿ ಗಾಯವಾದರೆ, 'ಧನುರ್ವಾತ' ರೋಗ ಹಿಡಿದೀತು" ಎಂದಾಗ ಸಭೆ ಇಡೀ ಘೊಳ್ಳೆಂದಿತು.

( ಸಮಯದಲ್ಲಿ ಟಿ.ಟಿ. ಎಂಬ ಖಾಯಿಲೆ ಮಾರಕವಾಗಿ ವ್ಯಾಪಿಸಿತ್ತುಟಿ.ಟಿ. ಎಂಬ ಖಾಯಿಲೆಗೆ ಕನ್ನಡ ಶಬ್ದ "ಧನುರ್ವಾತ" ಎಂಬುದಾಗಿ ಅದೇ ದಿನದ ಉದಯವಾಣಿ ಪತ್ರಿಕೆಯಲ್ಲಿ ಬಂದುದನ್ನು ಸಾಮಗರು ಸಮಯೋಚಿತವಾಗಿ ಬಳಸಿದ್ದರು.)

O :-   ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
                        M.  Shantharama Kudva, Moodabidri



No comments:

Post a Comment