Thursday 2 July 2015

ತಾಳಮದ್ದಳೆಯಲ್ಲಿ "ಸಮಕಾಲೀನ ರಾಜಕೀಯ"ದ ಪ್ರಸ್ತಾಪ

ತಾಳಮದ್ದಳೆಯಲ್ಲಿ ಆಗಾಗ ಪ್ರಚಲಿತ ರಾಜಕೀಯದ ಬಗ್ಗೆ ಉಲ್ಲೇಖವಾಗಿ ಜನರಂಜನೆ ಒದಗುವುದುಂಟು. ಶೇಣಿ, ಕಂಬ್ಳೆ, ಡಾ|| ಜೋಷಿ ಮೊದಲಾದವರ ಅರ್ಥಗಳಲ್ಲಿ ಧಾರಾಳ ಸಮಕಾಲೀನ ರಾಜಕೀಯದ ಘಟನೆಯು ಸಮಯೋಚಿತವಾಗಿ ಬರುವುದನ್ನು ನಾವು ಕಂಡಿದ್ದೇವೆ.

ಸುರತ್ಕಲ್ ಮೇಳದವರ "ರತ್ನಾವತಿ ಕಲ್ಯಾಣ" ಪ್ರಸಂಗ. ಅದರಲ್ಲಿ ಆಟದೊಳಗೊಂದು ಆಟದ ಸನ್ನಿವೇಶ ಉಂಟು. ಶೇಣಿಯವರ ಆಟದೊಳಗಿನ ಆಟದ "ಭಾಗವತ" ಪಾತ್ರ. ಶೇಣಿಯವರು ಭಾಗವತರ ಪೀಠಿಕೆಯಲ್ಲಿ,
"ತಮ್ಮದೊಂದು ಯಕ್ಷಗಾನ ತಂಡ ಉಂಟು. ತಂಡದ ಪ್ರದರ್ಶನ ಎಲ್ಲಿ ಮಾಡುವುದು?" ಎನ್ನುತ್ತಾ
"ಸ್ವರ್ಗದಲ್ಲಿ ದೇವರಾಜ ಅರಸನಾಗಿದ್ದಾನೆ. ಅಲ್ಲಿ ಪ್ರದರ್ಶಿಸೋಣವೇ, ಅಂದರೆ ಅವನು ಇಂದಿರೆಯ ಭಕ್ತ. ಆದುದರಿಂದ ಅಲ್ಲಿ ಬೇಡ" ಎಂದರು.
(ಆಗ ಕರ್ನಾಟಕದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದು, ಇಂದಿರಾಗಾಂಧಿಯ ಕಟ್ಟಾ ಬೆಂಬಲಿಗರಾಗಿದ್ದರು.)

"ವಾಲಿ ಮೋಕ್ಷ" ಪ್ರಸಂಗ. ಶೇಣಿ ವಾಲಿ, ಕಂಬ್ಳೆ ಶ್ರೀರಾಮ. ರಾಮ ಪರಾಗ್ಮುಖವಾಗಿ ಬಾಣ ಬಿಟ್ಟನೆಂದು ಆಕ್ಷೇಪಿಸುವ ಸಂಧರ್ಭದಲ್ಲಿ ಶೇಣಿಯವರು,
"ರಾಮಾ, ನಿನಗೆ ತೊಂದರೆ ಕೊಡದೇ ಇದ್ದರೂ ಹಿಂದಿನಿಂದ ಬಾಣ ಬಿಟ್ಟಿಯಲ್ಲಾ. ವಿಚಾರ ಎಲ್ಲಿಯಾದರೂ ನಿನ್ನ ಮಾನವ ಜಾತಿಯವರಿಗೆ ಗೊತ್ತಾದಲ್ಲಿ ಅವರೇ ನಿನ್ನನ್ನು ಶಿಕ್ಷಿಸಿಯಾರು" ಎಂದರು.
( ಸಂಧರ್ಭದಲ್ಲಿ ಪ್ರಾಣಿದಯಾ ಸಂಘದವರ ಪ್ರಾಣಿವಧೆ ಮಾಡಕೂಡದೆಂಬ ಅಭಿಯಾನ ಜೋರಾಗಿ ನಡೆಯುತ್ತಿದ್ದ ಕಾಲ.)

ಧರ್ಮಸ್ತಳ ಮೇಳದವರ "ಮಹಾಶೂರ ಭೌಮಾಸುರ" ಪ್ರಸಂಗ. ಕುಂಬ್ಳೆ ಸುಂದರರಾಯರ ಶ್ರೀಕೃಷ್ಣನ ಪಾತ್ರ. ನಯನಕುಮಾರರ ಕೃಷ್ಣನ ಭೇಟಿಗಾಗಿ ಬರುವ ಋಷಿಯ ಪಾತ್ರ. ನಯನಕುಮಾರರು
"ಶ್ರೀಕೃಷ್ಣಾ, ಉತ್ತರದ ಕಡೆ ಸಂಚಾರ ಮಾಡಿ, ಇದೀಗ ನಿನ್ನ ದರ್ಶನಕ್ಕೆ ಬಂದಿದ್ದೇನೆ" ಎಂದರು. ಕುಂಬ್ಳೆಯವರು,
"ಹೌದೇ? ಮುನಿವರ್ಯರೇ, ಅಲ್ಲಿ ಅಯೋಧ್ಯೆಯನ್ನು ಸಂದರ್ಶಿಸಿದ್ದೀರಿ ತಾನೇ? ಹೇಗುಂಟು ಅಯೋಧ್ಯೆಯ ಪರಿಸ್ಥಿತಿ" ಎಂದರು. ಕೂಡಲೇ ನಯನಕುಮಾರ್
"ದೇವಾ, ಅಯೋಧ್ಯೆಯಲ್ಲೀಗ ಪ್ರಕ್ಷುಬ್ಧ ಪರಿಸ್ಥಿತಿ. ನಾವೆಲ್ಲಾ ಬೇಲಿ ದಾಟಿಯೇ ಹೋಗಬೇಕಾಯಿತು" ಎಂದರು.
(ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿವಾದ ಪರಾಕಾಷ್ಟೆಗೇರಿ, ದೇವಸ್ಥಾನದ ಸುತ್ತ ತಡೆಬೇಲಿ ಹಾಕಿದ ಕಾಲವದು.)

"ರಾವಣ ಮೋಕ್ಷ" ರಾವಣನಾಗಿ ಶೇಣಿಯವರು. ಕುಂಬ್ಳೆಯವರ ಶ್ರೀರಾಮ. ದೇವೇಂದ್ರ ಮಾತಲಿಯಲ್ಲಿ ರಥ ಕಳಿಸಿ, ರಾಮನು ರಥವೇರಿ ಯುಧ್ಧ ಮಾಡುವ ಸಂಧರ್ಭ. ಶೇಣಿಯವರು,
"ರಾಮಾ, ಪರರದ್ದಾದರೂ ತೊಂದರೆ ಇಲ್ಲಾ, ಅಂತೂ ರಥವೇರಿದಿಯಲ್ಲಾ. ತುಂಬಾ ಸಂತೋಷ. ಏಕೆಂದರೆ ನಿನ್ನ ಜನ್ಮಸ್ಥಾನದಲ್ಲಿ ನಿನಗೆ ರಥೋತ್ಸವವಿಲ್ಲಾ. ನನ್ನ ಸ್ಥಾನದಲ್ಲಾದರೂ ನಿನಗೆ ರಥೋತ್ಸವವಾಯಿತಲ್ಲಾ" ಎಂದರು.
(ರಾಮ ಜನ್ಮಭೂಮಿ ವಿವಾದ ಉತ್ತುಂಗ ಶಿಖರವೇರಿದ ಕಾಲದಲ್ಲಿ ಶೇಣಿಯವರ ಸಮಯೋಚಿತ ವಾದ)

"ಪಾರ್ಥಸಾರಥ್ಯ" ತಾಳಮದ್ದಳೆ. ಡಾ||ಜೋಷಿಯವರ ಶ್ರೀಕೃಷ್ಣ. ನಿದ್ದೆಯಿಂದ ಎದ್ದ ಶ್ರೀಕೃಷ್ಣ, ಕೌರವ ಅರ್ಜುನರನ್ನು ನೋಡಿ
" ನನ್ನ ಭಾವಂದಿರೇ, ಅಂತೂ ಪರಸ್ಪರ ದ್ವೇಷಿಸುತ್ತಿದ್ದ ನೀವು ಈಗಲಾದರೂ ಒಟ್ಟಾದಿರಲ್ಲ. ರಾಜಕೀಯವೆಂದರೆ ಹಾಗೆಯೇ. ಒಳ್ಳೆಯ ಸಮಯದಲ್ಲೇ ನಿಮ್ಮ ಹೊಂದಾಣಿಕೆ ಆಯಿತು. ರಾಜಕಾರಣದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ. ಇನ್ನಾದರೂ ಲೋಕ ಕಲ್ಯಾಣವಾಗಲಿ" ಎಂದರು.
(ಆಗ ವಾಜಪೇಯಿಯವರು ಹದಿಮೂರು ಪಕ್ಷಗಳ ನೆರವಿನಿಂದ ಸರಕಾರ ರಚಿಸಿ ಕೆಲವೇ ದಿನಗಳಾಗಿದ್ದವು)

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
         M.  Shantharama Kudva, Moodabidri

No comments:

Post a Comment